ವಿಮಾನ ನಿಲ್ದಾಣ ಲಾಂಛನ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರಕ್ಕಾಗಿ ಎರಡು ಲಿಂಕ್ ರಸ್ತೆಗಳನ್ನು ನಿರ್ಮಿಸಲು ಬಿಬಿಎಂಪಿ ತನ್ನ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಲು ಸಜ್ಜಾಗಿದೆ.
ಸರ್ಕಾರದ ಆದೇಶದಂತೆ ಬಿಬಿಎಂಪಿ ತನ್ನ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಎರಡು ರಸ್ತೆಗಳನ್ನು ನಿರ್ಮಿಸಲು ಮುಂದಾಗಿದೆ. ಯಲಹಂಕ ವಲಯದ ರಸ್ತೆ ಮೂಲಸೌಕರ್ಯ ವಿಭಾಗದಿಂದ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯವಾದ ಅನುದಾನ, ರಸ್ತೆ ವಿಸ್ತರಣೆ, ಭೂಸ್ವಾಧೀನದ ವೆಚ್ಚ, ಕಟ್ಟಡ ನೆಲಸಮ, ಪ್ರಸ್ತುತವಿರುವ ರಸ್ತೆಗೆ ಮರು–ಡಾಂಬರೀಕರಣ ಸೇರಿದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ಆಹ್ವಾನಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಬಾಗಲೂರು ಮಾರ್ಗವಾಗಿ ಈಗ ನಿರ್ಮಾಣವಾಗುತ್ತಿರುವ ಪರ್ಯಾಯ ರಸ್ತೆಯನ್ನು ಹೊರತುಪಡಿಸಿ ಈ ಎರಡು ಲಿಂಕ್ ರಸ್ತೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಾಗಲೂರು ಮುಖ್ಯ ರಸ್ತೆಯಿಂದ ಕಂಟ್ರಿ ಕ್ಲಬ್ ಸಮೀಪದಲ್ಲಿ ಹೊಸ ಲಿಂಕ್ ರಸ್ತೆ ಹಾದು ಹೋಗಲಿದೆ. ಬೇಗೂರು ಬಳಿಯಿರುವ ವಿದ್ಯುತ್ ಪ್ರಸರಣಾ ಘಟಕದ ಸಮೀಪದಿಂದ ಸಾದಹಳ್ಳಿ ಗೇಟ್ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಇನ್ನೊಂದು ಲಿಂಕ್ ರಸ್ತೆ ನಿರ್ಮಾಣವಾಗಲಿದೆ. ಈ ಎರಡೂ ಲಿಂಕ್ ರಸ್ತೆಗಳು ಒಂದಕ್ಕೊಂದು ಪೂರಕವಾಗಿ ಸಂಪರ್ಕ ಸಾಧಿಸಲಿವೆ.
‘ಎರಡೂ ಲಿಂಕ್ ರಸ್ತೆಗಳನ್ನು ಬಹುತೇಕ ಹೊಸದಾಗಿಯೇ ನಿರ್ಮಾಣ ಮಾಡಬೇಕಿದೆ. ಈ ಭಾಗದಲ್ಲಿ ಕೆಲವು ‘ರೆವಿನ್ಯೂ ಲೇಔಟ್’ಗಳಿವೆ. ಅಲ್ಲಿಂದ ಒಂದಷ್ಟು ಮೀಟರ್ ರಸ್ತೆ ಇದೆ. ಅದನ್ನು ವಿಸ್ತರಿಸಬೇಕಿದೆ. ಉಳಿದ ಭಾಗದಲ್ಲಿ ಹೊಸದಾಗಿ ರಸ್ತೆ ನಿರ್ಮಿಸಬೇಕಿದ್ದು, ಭೂಸ್ವಾಧೀನ ಆಗಲೇಬೇಕಿದೆ’ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದರು.
‘ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಯೋಜನೆಯಡಿ ರಸ್ತೆಗೆ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಲಾಗಿದೆ. ಡಿಪಿಆರ್ ಸಿದ್ಧವಾದ ಬಳಿಕ ಎಷ್ಟು ಪ್ರಮಾಣದಲ್ಲಿ ಜಮೀನು ಸ್ವಾಧೀನವಾಗಲಿದೆ ಎಂಬುದು ಸ್ಪಷ್ಟವಾಗಲಿದೆ. ಸರ್ಕಾರದ ಆದೇಶ ಮೇರೆಗೆ ಪಾಲಿಕೆ ವತಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದರು.
‘ಸುಮಾರು 13 ಕಿ.ಮೀ. ಉದ್ದದಲ್ಲಿ ನಿರ್ಮಾಣವಾಗಲಿರುವ ಈ ಎರಡೂ ಲಿಂಕ್ ರಸ್ತೆಗಳಿಗೆ ಬಹುತೇಕ ಮಾರ್ಗದುದ್ದಕ್ಕೂ ಜಮೀನು ಸ್ವಾಧೀನ ಆಗಬೇಕಿದೆ. ಸರ್ಕಾರ ನಿಗದಿಪಡಿಸಿರುವ ಅನುದಾನ ಭೂಸ್ವಾಧೀನಕ್ಕೇ ವೆಚ್ಚವಾಗುವ ಸಂಭವವಿದೆ. ಅಲ್ಲದೆ, ಜಮೀನು ಕಳೆದುಕೊಳ್ಳುವವರು ಟಿಡಿಆರ್‌ಗೆ ಯಾವ ರೀತಿ ಒಪ್ಪುತ್ತಾರೋ ಈಗಲೇ ಹೇಳಲಾಗದು. ಎರಡು ಲಿಂಕ್ ರಸ್ತೆಗಳ ಮಾರ್ಗಗಳಲ್ಲಿ ಎರಡು ಮೇಲ್ಸೇತುವೆ ಹಾಗೂ ಒಂದು ರೈಲ್ವೆ ಮೇಲ್ಸೇತುವೆಯನ್ನೂ (ಆರ್‌ಒಬಿ) ನಿರ್ಮಿಸಬೇಕಾಗುತ್ತದೆ. ಹೀಗಾಗಿ, ಅನುದಾನದ ಕೊರತೆ ಎದುರಾಗಬಹುದು’ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.