ADVERTISEMENT

ಬೆಂಗಳೂರು: ಇಬ್ಬರು ಮೊಬೈಲ್‌ ಸುಲಿಗೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:52 IST
Last Updated 13 ಸೆಪ್ಟೆಂಬರ್ 2024, 15:52 IST
   

ಬೆಂಗಳೂರು: ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮೊಬೈಲ್‌ ಸುಲಿಗೆ ಮಾಡಿ ಪರಾರಿ ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾರೋಹಳ್ಳಿಯ ಬನ್ನಿಕೊಪ್ಪ ಕೈಗಾರಿಕಾ ಪ್ರದೇಶದ ನಿವಾಸಿ ಚೇತನ್‌ ಅಲಿಯಾಸ್‌ ಚಿಟ್ಟೆ(23), ಸುಂಕದಕಟ್ಟೆ ಶ್ರೀನಿವಾಸನಗರದ ಪೈಪ್‌ಲೈನ್‌ ರಸ್ತೆಯ ನಿವಾಸಿ ನವೀನ್‌ಕುಮಾರ್ ಅಲಿಯಾಸ್‌ ಅಪ್ಪು(20) ಬಂಧಿತರು.

‘ಬಂಧಿತರಿಂದ ₹1.70 ಲಕ್ಷ ಮೌಲ್ಯದ ವಿವಿಧ ಕಂಪನಿಯ 17 ಮೊಬೈಲ್‌ ಫೋನ್‌ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ರಾಜಾಜಿನಗರದ ಗಜಾನನ ಪಿ.ಜಿ. ಸರ್ವೀಸ್ ರಸ್ತೆಯ ನಿವಾಸಿ ವಿಷ್ಣುವರ್ಧನ್‌ ಅವರು ಕೆಲಸ ಮುಗಿಸಿಕೊಂಡು ಪಿ.ಜಿಗೆ ತೆರಳುತ್ತಿದ್ದರು. ಸುಂಕದಕಟ್ಟೆಯ ವೈಲ್ಡ್‌ಕ್ರಾಫ್ಟ್‌ ಕಂಪನಿ ಮಳಿಗೆ ಎದುರು ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದು ತೆರಳುತ್ತಿದ್ದರು. ಅದೇ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು, ಮೊಬೈಲ್‌ ಕಸಿದುಕೊಂಡು ಪರಾರಿ ಆಗಿದ್ದರು. ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಮೊಬೈಲ್‌ ಸುಲಿಗೆ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದರು. ಇಬ್ಬರ ಬಂಧನದಿಂದ ಕಾಮಾಕ್ಷಿಪಾಳ್ಯದಲ್ಲಿ ಎರಡು ಹಾಗೂ ಗೋವಿಂದರಾಜನಗರದಲ್ಲಿ ಒಂದು ಮೊಬೈಲ್‌ ಕಳ್ಳತನ ಪ್ರಕರಣ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.