ADVERTISEMENT

ಬೆಂಗಳೂರು | ಪ್ರತ್ಯೇಕ ಅಪಘಾತ: ವೃದ್ಧೆ ಸೇರಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 14:32 IST
Last Updated 10 ಫೆಬ್ರುವರಿ 2024, 14:32 IST
ಅಪಘಾತ
ಅಪಘಾತ   

ಬೆಂಗಳೂರು: ನಗರದ ಮಲ್ಲೇಶ್ವರ ಹಾಗೂ ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ವೃದ್ಧೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಿವಾಸಿ ಆಶಾರಾಣಿ (62) ಹಾಗೂ ಮಾಲೂರಿನ ಹನುಮಂತ (25) ಮೃತರು.

ಮೆಟ್ರೊ ನಿಲ್ದಾಣ ಎದುರು ಅಪಘಾತ: ‘ಆಶಾರಾಣಿ ಅವರು ಬೇರೆ ಊರಿಗೆ ತೆರಳಲು ಶನಿವಾರ ಬೆಳಿಗ್ಗೆ 5.45 ಗಂಟೆ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್ ಮೆಟ್ರೊ ನಿಲ್ದಾಣ ಬಳಿ ಬಂದಿದ್ದರು. ಅವರು ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು’ ಎಂದು ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ಹೇಳಿದರು.

ADVERTISEMENT

‘ತೀವ್ರ ಗಾಯಗೊಂಡು ಆಶಾರಾಣಿ ಮೃತಪಟ್ಟಿದ್ದಾರೆ. ಅಪಘಾತದ ನಂತರ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ’ ಎಂದು ತಿಳಿಸಿದರು.

ಇ–ಕಾಮರ್ಸ್ ಕಂಪನಿ ಉದ್ಯೋಗಿ: ‘ಇ– ಕಾಮರ್ಸ್ ಕಂಪನಿಯೊಂದರ ನೌಕರ ಹನುಮಂತ, ಶುಕ್ರವಾರ ರಾತ್ರಿ 7.30ರ ವೇಳೆಗೆ ಎನ್‌ಜಿಆರ್ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು’ ಎಂದು ಮಡಿವಾಳ ಸಂಚಾರ ಪೊಲೀಸರು ಹೇಳಿದರು.

‘ಇನ್ನೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಬೈಕ್ ಸಮೇತ ಉರುಳಿಬಿದ್ದ ಹನುಮಂತ ಅವರಿಗೆ ತೀವ್ರ ಪೆಟ್ಟಾಗಿದೆ.ಅಪಘಾತಕ್ಕೆ ಕಾರಣವಾದ ಸವಾರ, ಬೈಕ್ ಸಮೇತ ಪರಾರಿಯಾಗಿದ್ದಾನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.