ADVERTISEMENT

ಪುಟ್ಟೇನಹಳ್ಳಿ : ಮನೆಗೆ ನುಗ್ಗಿ ಇಬ್ಬರ ಹತ್ಯೆ

* ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಮೊಬೈಲ್, ಚಿನ್ನಾಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:31 IST
Last Updated 8 ಏಪ್ರಿಲ್ 2021, 14:31 IST
ಮಮತಾ ಬಸು
ಮಮತಾ ಬಸು   

ಬೆಂಗಳೂರು: ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ‌ ನುಗ್ಗಿ ವೃದ್ಧೆ ಸೇರಿ ಇಬ್ಬರನ್ನು ಹತ್ಯೆ ಮಾಡಿರುವ ದುಷ್ಕರ್ಮಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಸಮೇತ ಪರಾರಿಯಾಗಿದ್ದಾನೆ.

‘ಮಮತಾ ಬಸು (75) ಹಾಗೂ ಅವರ ಮಗನ ಸ್ನೇಹಿತ ದೇವಬ್ರತ್ (41) ಕೊಲೆಯಾದವರು. ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಮೃತದೇಹಗಳು ಬಿದ್ದಿದ್ದವು. ಸ್ಥಳಕ್ಕೆ ಹೋಗಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದ ಆರೋಪಿ, ಇಬ್ಬರನ್ನೂ ಹತ್ಯೆ ಮಾಡಿ ಹೋಗಿರುವ ಅನುಮಾನವಿದೆ. ಯಾರಾದರೂ ಪರಿಚಯಸ್ಥರು ಕೃತ್ಯ ಎಸಗಿರಬಹುದೆಂಬ ಶಂಕೆಯೂ ಇದೆ. ಎರಡೂ ಆಯಾಮದಲ್ಲೂ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಪ್ರತ್ಯೇಕವಾಗಿ ನೆಲೆಸಿದ್ದ ವೃದ್ಧೆ: ‘ಪಶ್ಚಿಮ ಬಂಗಾಳದ ಮಮತಾ ಬಸು ಹಾಗೂ ಅವರ ಮಗ ದೇವ್‌ ಬಸು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಜೆ.ಪಿ.ನಗರದ ಸಂತೃಪ್ತಿ ನಗರದಲ್ಲಿರುವ ಸ್ವಂತ ಮನೆಯಲ್ಲಿ ವಾಸವಿದ್ದರು. 2018ರಲ್ಲಿ ಮಗನಿಗೆ ಮದುವೆಯಾಗಿತ್ತು. ಅತ್ತೆ– ಸೊಸೆ ನಡುವೆ ಜಗಳ ಶುರುವಾಗಿತ್ತು. ಪತ್ನಿ ಸಮೇತ ಮನೆ ತೊರೆದಿದ್ದ ಮಗ ದೇವ್, ಪ್ರತ್ಯೇಕವಾಗಿ ವಾಸವಿದ್ದರು. ಮಮತಾ ಒಬ್ಬರೇ ಮನೆಯಲ್ಲಿದ್ದರು’ ಎಂದು ಪೊಲೀಸರು ಹೇಳಿದರು.

‘ನಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಮಗ, ಆಗಾಗ ತಾಯಿ ಮನೆಗೆ ಬಂದು ಹೋಗುತ್ತಿದ್ದರು. ಮಗನ ಸ್ನೇಹಿತನಾದ ಪಶ್ಚಿಮ ಬಂಗಾಳದ ದೇವಬ್ರತ್ ಅವರಿಗೆ ನಗರದ ಕಾಲೇಜೊಂದರಲ್ಲಿ ಉಪನ್ಯಾಸಕ ಕೆಲಸ ಸಿಕ್ಕಿತ್ತು. ಬೆಂಗಳೂರಿಗೆ 20 ದಿನಗಳ ಹಿಂದಷ್ಟೇ ಬಂದಿದ್ದ ಅವರು, ಸ್ನೇಹಿತನ ತಾಯಿ ಮಮತಾ ಮನೆಯಲ್ಲಿ ಉಳಿದುಕೊಂಡಿದ್ದರು.’

ಊಟ ಮಾಡಿಕೊಂಡು ಹೋಗಿದ್ದ ಮಗ: ‘ತಾಯಿ ಮನೆಗೆ ಬುಧವಾರ ಸಂಜೆ ಬಂದಿದ್ದ ಮಗ, ರಾತ್ರಿ 9ರವರೆಗೂ ಇದ್ದರು. ತಾಯಿ, ಸ್ನೇಹಿತನ ಜೊತೆ ಊಟ ಮಾಡಿದ್ದರು. ನಂತರ, ಮನೆಗೆ ವಾಪಸು ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮಮತಾ ಹಾಗೂ ದೇವಬ್ರತ್ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ತಡರಾತ್ರಿ ಬೈಕ್‌ನಲ್ಲಿ ಮನೆ ಬಳಿ ಬಂದಿದ್ದ ವ್ಯಕ್ತಿಯೊಬ್ಬ, ಮನೆಯೊಳಗೆ ನುಗ್ಗಿದ್ದ. ನಂತರ ಇಬ್ಬರ ಕೊಠಡಿಗೂ ಹೋಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಮಾಹಿತಿ ಇದೆ’ ಎಂದೂ ಹೇಳಿದರು.

‘ಹತ್ಯೆ ನಂತರ ಮನೆಯಲ್ಲೆಲ್ಲ ಓಡಾಡಿರುವ ಆರೋಪಿ, ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ ಹಾಗೂ ಎಟಿಎಂ ಕಾರ್ಡ್‌ ದೋಚಿ ಪರಾರಿಯಾಗಿದ್ದಾನೆ‌. ಗುರುವಾರ ಬೆಳಿಗ್ಗೆ ಕೆಲಸಕ್ಕೆ ಬಂದಿದ್ದ ಮಹಿಳೆ ಮೃತದೇಹ ಕಂಡು ಚೀರಿದ್ದರು’ ಎಂದೂ ತಿಳಿಸಿದರು.

‘ಕೊಲೆ ಸಂಬಂಧ ಮಗ ದೇವ್‌ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದೂ ಪೊಲೀಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.