ADVERTISEMENT

ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್‌ ಪರೀಕ್ಷೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 19:32 IST
Last Updated 2 ಜುಲೈ 2021, 19:32 IST
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಎಸ್‌.ಎಂ.ಜಯಕರ ಅವರಿಗೆ ಎಐಡಿಎಸ್ಒ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಎಸ್‌.ಎಂ.ಜಯಕರ ಅವರಿಗೆ ಎಐಡಿಎಸ್ಒ ವತಿಯಿಂದ ಮನವಿ ಸಲ್ಲಿಸಲಾಯಿತು.   

ಬೆಂಗಳೂರು: ‘ಫಾರ್ಮಸಿ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆಗಳನ್ನು ರದ್ದುಗೊಳಿಸಿ, ಆಂತರಿಕ ಮೌಲ್ಯಮಾಪನ ಅಥವಾ ವೈಜ್ಞಾನಿಕ ಮಾನದಂಡಗಳ ಮೌಲ್ಯಮಾಪನ ನಡೆಸಬೇಕು’ ಎಂದುಆಲ್‌ ಇಂಡಿಯಾ ಡೆಮಾಕ್ರಟಿಕ್ಸ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್ (ಎಐಡಿಎಸ್ಒ) ಸಂಘಟನೆ ಆಗ್ರಹಿಸಿದೆ.

ಈ ಸಂಬಂಧ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಘಟನೆ ಪತ್ರ ಬರೆದಿದೆ.

‘ಕೋವಿಡ್‌ ಬಿಕ್ಕಟ್ಟಿನಿಂದಾಗಿ ಹಿಂದಿನ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ವಿದ್ಯಾರ್ಥಿಗಳೂ ಈಗ ಮುಂದಿನ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆ ನಡೆಸುವ ದಿಢೀರ್ ನಿರ್ಧಾರ ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳ ಮೇಲೆ ಹೊರೆ ಹೆಚ್ಚಾಗಲಿದೆ’ ಎಂದುಎಐಡಿಎಸ್ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್.ಅಶ್ವಿನಿ ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಶಿಕ್ಷಣ ತಜ್ಞರು, ಪೋಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಶೈಕ್ಷಣಿಕ ವೇಳಾ‍ಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಸಂಬಂಧ ವೈಜ್ಞಾನಿಕ ನೀತಿ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಭೌತಿಕ ತರಗತಿಗಳ ಆರಂಭಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನುಉಚಿತವಾಗಿ ನೀಡಬೇಕು. ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು’ ಎಂದೂ ಒತ್ತಾಯಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.