ADVERTISEMENT

ಬೆಂಗಳೂರು: ಕಾಮಗಾರಿ ವೇಳೆ ಮಣ್ಣು ಕುಸಿತ; ಇಬ್ಬರು ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 16:27 IST
Last Updated 30 ಸೆಪ್ಟೆಂಬರ್ 2025, 16:27 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾರ್ಥ ಕಾಲೊನಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ತೆಗೆಯುತ್ತಿದ್ದ ವೇಳೆ ಅಪಾರ ಪ್ರಮಾಣದ ಮಣ್ಣು ಕುಸಿದು ಜಾರ್ಖಂಡ್‌ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಲಾಲ್‌ ಮುದ್ದೀನ್‌ (33) ಮತ್ತು ರಜಾವುದ್ದೀನ್ (32) ಎಂಬುವವರು ಮೃತಪಟ್ಟಿದ್ದಾರೆ. ಕಾರ್ಮಿಕ ಸೈಫುಲ್ಲಾ (28) ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿದ್ದಾರ್ಥ ಕಾಲೊನಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಡಿಪಾಯಕ್ಕಾಗಿ 20 ಅಡಿ ಆಳವಾದ ಗುಂಡಿ‌ ತೆಗೆಯಲಾಗುತ್ತಿತ್ತು. ಏಕಾಏಕಿ ಅಪಾರ ಪ್ರಮಾಣದ ಮಣ್ಣು ಕಾರ್ಮಿಕರ ಮೇಲೆ ಕುಸಿದಿದೆ. ಮಣ್ಣಿನಡಿ ಸಿಲುಕಿದ ಇಬ್ಬರು ಮೃತಪಟ್ಟರು. ಮಣ್ಣಿನ ಅಡಿ ಸಿಲುಕಿದ್ದ ಒಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಐವರು ಮೇಲೆ ಬಂದು ಪಾರಾಗಿದ್ದಾರೆ.

‘ಒಂದು ಕಡೆ ಪಿಲ್ಲರ್‌ಗೆ ಸಿಮೆಂಟ್ ಪ್ಯಾಕಿಂಗ್ ಹಾಕಲಾಗುತ್ತಿತ್ತು. ಮತ್ತೊಂದೆಡೆ 8 ಮಂದಿ ಕೂಲಿ ಕಾರ್ಮಿಕರು ಅಡಿಪಾಯದ ಕೆಲಸಗಳಲ್ಲಿ ನಿರತರಾಗಿದ್ದರು. ಕೆಳಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾಗಲೇ ಗುಂಡಿಯ ಮೇಲ್ಭಾಗದಿಂದ ಭಾರಿ ಪ್ರಮಾಣದ ಮಣ್ಣು ಕುಸಿದಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಅವರು ಭೇಟಿ ನೀಡಿ ಪರಿಶೀಲಿಸಿದರು.

‘ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಗುತ್ತಿಗೆದಾರರು ಮತ್ತು ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.