ADVERTISEMENT

ಕೆಲಸ ಕಿತ್ತ ‘ಕೋವಿಡ್‌’; ಕಳ್ಳತನಕ್ಕಿಳಿದಿದ್ದ ಎಂಜಿನಿಯರ್ ಸೆರೆ

* ಪೀಣ್ಯ ಪೊಲೀಸರ ಕಾರ್ಯಾಚರಣೆ; ₹ 30 ಲಕ್ಷ ಮೌಲ್ಯದ ಯುಬಿಬಿಪಿ ಕಾರ್ಡ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:19 IST
Last Updated 4 ಅಕ್ಟೋಬರ್ 2021, 16:19 IST
ಆರೋಪಿಯಿಂದ ಜಪ್ತಿ ಮಾಡಲಾದ ಯುಬಿಬಿಪಿ ಕಾರ್ಡ್‌ಗಳು
ಆರೋಪಿಯಿಂದ ಜಪ್ತಿ ಮಾಡಲಾದ ಯುಬಿಬಿಪಿ ಕಾರ್ಡ್‌ಗಳು   

ಬೆಂಗಳೂರು: ‘ಕೋವಿಡ್‌’ನಿಂದ ಕೆಲಸ ಹೋಗಿದ್ದರಿಂದ ಅಕ್ರಮವಾಗಿ ಹಣ ಗಳಿಸಲು ಕಳ್ಳತನಕ್ಕೆ ಇಳಿದಿದ್ದ ಆರೋಪಿ ಗಂಗಾಧರ್ ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

‘ಕಲಬುರ್ಗಿಯ ಗಂಗಾಧರ್, ಕೋರಮಂಗಲದ ಕಂಪನಿಯೊಂದರಲ್ಲಿ ಸೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್‌ನಿಂದ ಕೆಲಸ ಹೋಗಿತ್ತು. ಹಲವೆಡೆ ಹುಡುಕಾಡಿದರೂ ಹೊಸ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ, ಮೊಬೈಲ್‌ ಟವರ್‌ನಲ್ಲಿ ಅಳವಡಿಸುತ್ತಿದ್ದ ಯುಬಿಬಿಪಿ ಕಾರ್ಡ್‌ಗಳನ್ನು ಕಳ್ಳತನ ಮಾಡಲಾರಂಭಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೊಬೈಲ್‌ ಸಿಗ್ನಲ್‌ಗಳನ್ನು ಗ್ರಹಿಸಿ ಪರಿವರ್ತಿಸುವ ಪ್ರಕ್ರಿಯೆಗಾಗಿ ಟವರ್‌ನಲ್ಲಿ ಯೂನಿರ್ವಸಲ್ ಬೇಸ್‌ಬ್ಯಾಂಡ್ ಪ್ರೊಸೆಸಿಂಗ್ ಯೂನಿಟ್ ಬೋರ್ಡ್ (ಯುಬಿಬಿಪಿ) ಕಾರ್ಡ್‌ಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಲಕ್ಷಗಟ್ಟಲೇ ಬೆಲೆ ಇದೆ. ಇದನ್ನು ತಿಳಿದುಕೊಂಡಿದ್ದ ಆರೋಪಿ, ನಗರದ ಹಲವು ಟವರ್‌ಗಳಲ್ಲಿದ್ದ ಯುಬಿಬಿಪಿ ಕಾರ್ಡ್‌ಗಳನ್ನು ಕದ್ದಿದ್ದ. ಆತನಿಂದ ₹ 30 ಲಕ್ಷ ಮೌಲ್ಯದ 19 ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಐಟಿಐ ಓದಿದ್ದ: ‘ಐಟಿಐ ಮುಗಿಸಿದ್ದ ಆರೋಪಿ ಗಂಗಾಧರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಮೊಬೈಲ್ ಟವರ್ ನಿರ್ವಹಣೆ ಮಾಡುವ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಸೈಟ್‌ ಎಂಜಿನಿಯರ್ ಆಗಿ ಪದೋನ್ನತಿಯೂ ಆಗಿತ್ತು. ಕಂಪನಿ ಪರವಾಗಿ ಆರೋಪಿಯೇ ಟವರ್‌ಗಳ ನಿರ್ವಹಣೆ ಮಾಡುತ್ತಿದ್ದ. ಹೀಗಾಗಿ, ಆತನಿಗೆ ಯುಬಿಬಿಪಿ ಕಾರ್ಡ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರು ತಿಂಗಳ ಹಿಂದಷ್ಟೇ ಗಂಗಾಧರ್‌ನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಆತನಿಗೆ ಆರ್ಥಿಕ ತೊಂದರೆ ಉಂಟಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಬೇರೆ ಕೆಲಸ ಸಿಕ್ಕಿರಲಿಲ್ಲ. ಅವಾಗಲೇ, ಯುಬಿಬಿಪಿ ಕಾರ್ಡ್‌ಗಳನ್ನು ಕದ್ದು ಮಾರಿ ಹಣ ಗಳಿಸಲು ಯೋಚಿಸಿದ್ದ’ ಎಂದೂ ತಿಳಿಸಿವೆ.

ಕಾರ್ಡ್‌ ಖರೀದಿಸದ ಜನ; ‘ಬೆಳಿಗ್ಗೆ 4 ಗಂಟೆಯಿಂದ 5 ಗಂಟೆ ಅವಧಿಯಲ್ಲಿ ಟವರ್‌ ಬಳಿ ಹೋಗುತ್ತಿದ್ದ ಆರೋಪಿ, ಟಾವರ್‌ನಲ್ಲಿರುತ್ತಿದ್ದ ಯುಬಿಬಿಪಿ ಕಾರ್ಡ್‌ಗಳನ್ನು ಸುಲಭವಾಗಿ ಕದಿಯುತ್ತಿದ್ದ’ ಎಂದೂ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

‘ಕಾರ್ಡ್‌ ಮಾರಲು ಆರೋಪಿ ಹಲವರ ಬಳಿ ಸುತ್ತಾಡಿದ್ದ. 7 ಕಾರ್ಡ್‌ಗಳನ್ನು ಮಾತ್ರ ಗುಜರಿ ಅಂಗಡಿಯವರು ತಲಾ ₹ 500ಕ್ಕೆ ಖರೀದಿಸಿದ್ದರು. ಉಳಿದ 12 ಕಾರ್ಡ್‌ಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.’

‘ಯುಬಿಬಿಪಿ ಕಾರ್ಡ್‌ಗಳು ಕಳುವಾಗುತ್ತಿದ್ದ ಬಗ್ಗೆ ನಿರ್ವಹಣಾ ಕಂಪನಿ ಪ್ರತಿನಿಧಿ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ. ಕೋಣನಕುಂಟೆ, ಪುಲಿಕೇಶಿನಗರ, ಕೆ.ಜಿ.ಹಳ್ಳಿ, ಬನಶಂಕರಿ, ಸುಬ್ರಮಣ್ಯಪುರ ಹಾಗೂ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.