ADVERTISEMENT

ಅನುದಾನ ತಾರತಮ್ಯ ಆರೋಪ: ನಗರಾಭಿವೃದ್ಧಿ ಅಧಿಕಾರಿಗಳಿಗೆ ಕ್ಲೀನ್‌ಚಿಟ್‌

ಎಚ್‌.ಡಿ. ಕುಮಾರಸ್ವಾಮಿಗೆ ಎಸಿಎಸ್‌ ರಾಕೇಶ್ ಸಿಂಗ್‌ ಪತ್ರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:46 IST
Last Updated 28 ಜೂನ್ 2021, 21:46 IST

ಬೆಂಗಳೂರು: ನೆಲಮಂಗಲ, ರಾಮನಗರ, ಮಾಗಡಿ ಹಾಗೂ ದೇವನಹಳ್ಳಿ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ–3 ಮತ್ತು ಅಧೀನ ಕಾರ್ಯದರ್ಶಿ (ಬಿಬಿಎಂಪಿ) ತ‍ಪ್ಪು ಮಾಹಿತಿ ನೀಡಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾಡಿದ್ದ ಆರೋಪಗಳನ್ನು ನಗರಾಭಿವೃದ್ಧಿ ಇಲಾಖೆ ತಳ್ಳಿಹಾಕಿದೆ.

‘ಕಸ ವಿಲೇವಾರಿಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ ಈ ಕ್ಷೇತ್ರಗಳಿಗೆ ತಲಾ ₹ 30 ಕೋಟಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೂ ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ–3 ಮತ್ತು ಅಧೀನ ಕಾರ್ಯದರ್ಶಿ (ಬಿಬಿಎಂಪಿ) ಅವರು ಸರ್ಕಾರಿ ಆದೇಶಗಳನ್ನು ಸರಿಯಾಗಿ ಗಮನಿಸದೇ ಈ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆರ್ಥಿಕ ಇಲಾಖೆ ಈ ಹಿಂದೆಯೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದ್ದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಕುಮಾರಸ್ವಾಮಿ ಮುಖ್ಯ ಕಾರ್ಯದರ್ಶಿ ಅವರಿಗೆ 2020ರ ಆಗಸ್ಟ್‌ 20ರಂದು ಪತ್ರ ಬರೆದಿದ್ದರು.

ಈ ಬಗ್ಗೆ ಕ್ರಮಕ್ಕೆ ಸೂಚಿಸಿ ಮುಖ್ಯ ಕಾರ್ಯದರ್ಶಿ ಅವರು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರು, ಕುಮಾರಸ್ವಾಮಿಗೆ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ADVERTISEMENT

‘2018–19ರ ಬಜೆಟ್‌ನಲ್ಲಿ ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ಯ ಕ್ರಿಯಾಯೋಜನೆಯಲ್ಲಿ ಕಸ ನಿರ್ವಹಣೆಗೆ ನಿಗದಿಪಡಿಸಲಾದ ₹ 753 ಕೋಟಿಯಲ್ಲಿ ₹ 150 ಕೋಟಿಯನ್ನು ಈ ನಾಲ್ಕು ಕ್ಷೇತ್ರಗಳ ಅಭಿವೃದ್ಧಿಗೆ ಕಾಯ್ದಿರಿಸಲಾಗಿತ್ತು. ಇದಕ್ಕೆ 2019ರ ಫೆ. 01ರಂದು ಸರ್ಕಾರ ಅನುಮೋದನೆ ನೀಡಿದೆ. ಆದರೆ, ನಂತರ ಸರ್ಕಾರ ಈ ಯೋಜನೆಯನ್ನೇ ರದ್ದುಗೊಳಿಸಿ ‘ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ’ಯ ಕ್ರಿಯಾಯೋಜನೆ ರೂಪಿಸಿ 2012ರ ಸೆ. 20 ರಂದು ಜಾರಿಗೆ ತಂದಿದೆ.’

‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಲ್ಲಿ ಕಸ ವಿಲೇವಾರಿಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ನಂತರ ₹ 584.34 ಕೋಟಿಗೆ ಕಡಿತಗೊಳಿಸಲಾಗಿದೆ. ನಂತರ ಶಾಸಕರಾದ ಅನಿತಾ ಕುಮಾರಸ್ವಾಮಿ, ಶರವಣ, ಎಂ.ರಮೇಶ್‌ ಗೌಡ, ನಿಸರ್ಗ ನಾರಾಯಣಸ್ವಾಮಿ ಎ.ಮಂಜುನಾಥ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಮನವಿ ಪತ್ರಗಳನ್ನು ಆಧರಿಸಿ ಮುಖ್ಯಮಂತ್ರಿಗಳ ನವಬೆಂಗಳೂರು ಯೋಜನೆಯಡಿ ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿಲ್ಲ’ ಎಂದು ರಾಕೇಶ್‌ ಸಿಂಗ್‌ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.