ADVERTISEMENT

ಕಸ ನಿರ್ವಹಣೆ ಹೊಣೆ ಕೆಆರ್‌ಐಡಿಎಲ್‌ಗೆ ಬೇಡ

ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಸೂಚನೆ

ಮಂಜುನಾಥ್ ಹೆಬ್ಬಾರ್‌
Published 5 ಆಗಸ್ಟ್ 2019, 19:18 IST
Last Updated 5 ಆಗಸ್ಟ್ 2019, 19:18 IST
ಕಸ
ಕಸ   

ಬೆಂಗಳೂರು: ‘ಕಸ ವಿಲೇವಾರಿ ಬಿಬಿಎಂಪಿಯ ಶಾಸನಬದ್ಧ ಕರ್ತವ್ಯ. ಮಿಶ್ರ ಕಸವನ್ನು ಭೂಭರ್ತಿ ಘಟಕಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಯ ಹೊಣೆಯನ್ನು ಯಾವುದೇ ಕಾರಣಕ್ಕೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್‌) ವಹಿಸುವಂತಿಲ್ಲ’ ಎಂದು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಗೆ ಸ್ಪಷ್ಟವಾಗಿ ಸೂಚಿಸಿದೆ.

ಇಲಾಖೆಯ ಸಮ್ಮತಿ ಸಿಗದ ಕಾರಣ ಇನ್ನು ಮೂರು ತಿಂಗಳು ಮಿಶ್ರ ಕಸವನ್ನು ಬೆಲ್ಲಹಳ್ಳಿ ಕ್ವಾರಿ ಪಕ್ಕದಲ್ಲಿ ಖಾಸಗಿ ಕ್ವಾರಿಯಲ್ಲಿ ವಿಲೇ ಮಾಡಲು ಪಾಲಿಕೆ ಮುಂದಾಗಿದೆ. ಈ ಕಾರ್ಯವನ್ನು ತನ್ನ ಅಧಿಕಾರಿಗಳಿಂದಲೇ ನಿರ್ವಹಿಸಲು ಒಪ್ಪಿಕೊಂಡಿದೆ.

ಬೆಳ್ಳಹಳ್ಳಿಯ ಭೂಭರ್ತಿ ಘಟಕವು ಆ.20ರ ಒಳಗೆ ಭರ್ತಿ ಆಗಲಿದೆ. ಹಾಗಾಗಿ ಮಿಶ್ರ ಕಸವನ್ನು ಮಿಟಗಾನಹಳ್ಳಿಯ ಕಲ್ಲುಗಣಿ ಗುಂಡಿಯಲ್ಲಿ ಕೆಆರ್‌ಐಡಿಎಲ್‌ ನೆರವಿನಿಂದ ವಿಲೇ ಮಾಡುವುದಕ್ಕೆ ಅವಕಾಶ ನೀಡಬೇಕು. ಈ ಸಲುವಾಗಿ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4 (ಎ) ಅಡಿ ವಿನಾಯಿತಿ ನೀಡಬೇಕು ಎಂದು ಪಾಲಿಕೆಯು ನಗರಾಭಿವೃದ್ಧಿ ಇಲಾಖೆಯನ್ನು ಕೋರಿತ್ತು. ಇದನ್ನು ಇಲಾಖೆ ತಿರಸ್ಕರಿಸಿತ್ತು.

ADVERTISEMENT

ಪಾಲಿಕೆ ನಂತರ, 2016–17ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆ ನೀಡಲಾಗಿದ್ದ ಎರಡು ಕಾಮಗಾರಿಗಳ ಬದಲಿಗೆ ಮಿಟಗಾನಹಳ್ಳಿ ಕ್ವಾರಿಯಲ್ಲಿ ಕಸ ವಿಲೇವಾರಿಗೆ ಅನುವು ಮಾಡಿಕೊಡುವಂತೆ ಪಾಲಿಕೆ ಕೋರಿತ್ತು. ಈ ಪ್ರಸ್ತಾವಕ್ಕೂ ನಗರಾಭಿವೃದ್ಧಿ ಇಲಾಖೆ ಸಮ್ಮತಿಸಿರಲಿಲ್ಲ.

2019–20ನೇ ಸಾಲಿನ ‘ಮುಖ್ಯಮಂತ್ರಿಗಳ ನವಬೆಂಗಳೂರು’ ಯೋಜನೆಯಲ್ಲಿ ಕಸ ನಿರ್ವಹಣೆಗೆ ಅನುದಾನ ಒದಗಿಸಲಾಗಿತ್ತು. ಆದರೆ, ಕಲ್ಲುಗಣಿಯ ಗುಂಡಿಯಲ್ಲಿ ಭೂಭರ್ತಿ ಮಾಡುವುದಕ್ಕೆ ಅನುದಾನ ನೀಡಿರಲಿಲ್ಲ. ಭೂಭರ್ತಿ ಮಾಡುವುದಕ್ಕೆ ಪಾಲಿಕೆಯೂ ತನ್ನ ನಿಧಿಯಲ್ಲಿ ಅನುದಾನ ನಿಗದಿಪಡಿಸಿಲ್ಲ.

ಮಿಟಗಾನಹಳ್ಳಿ ಕ್ವಾರಿಯಲ್ಲಿ ಭೂಭರ್ತಿ ಕಾಮಗಾರಿಯ ಹೊಣೆಯನ್ನು ಕೆಆರ್‌ಐಡಿಎಲ್‌ಗೆ ವಹಿಸಲು ಇಲಾಖೆಯ ಸಮ್ಮತಿ ಸಿಗದ ಕಾರಣ ಪಾಲಿಕೆ ಇದಕ್ಕೆ ಟೆಂಡರ್‌ ಆಹ್ವಾನಿಸಿದೆ. ಟೆಂಡರ್‌ನ ಪೂರ್ವಭಾವಿ ಸಭೆಯಲ್ಲಿ ಗುತ್ತಿಗೆದಾರರಿಂದ ಬೇಡಿಕೆ ಬಂದಿದ್ದರಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಪಾಲಿಕೆ ಮತ್ತೆ ಏಳು ದಿನ ವಿಸ್ತರಿಸಿತ್ತು. ಅರ್ಜಿ ಸಲ್ಲಿಸಲು ಇದೇ 7 ಕೊನೆಯ ದಿನ.

ಈ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ 2019ರ ನವೆಂಬರ್ 1ರವರೆಗೆ ಮಿಟಗಾನಹಳ್ಳಿ ಕ್ವಾರಿಯಲ್ಲಿ ಭೂಭರ್ತಿ ಕಾಮಗಾರಿಯನ್ನು ಕೆಆರ್‌ಐಡಿಎಲ್‌ ಮೂಲಕ ನಿರ್ವಹಿಸಬೇಕೆಂಬ ಪಾಲಿಕೆಯ ಕೋರಿಕೆಗೂ ನಗರಾಭಿವೃದ್ಧಿ ಇಲಾಖೆ ಸೊಪ್ಪು ಹಾಕಿಲ್ಲ.

ಭೂಭರ್ತಿಗೆ ಟೆಂಡರ್‌ ಆಹ್ವಾನಿಸುವುದಕ್ಕೆ ಫೆಬ್ರುವರಿಯಲ್ಲೇ ಅನುಮೋದನೆ ನೀಡಲಾಗಿತ್ತು. ಆದರೂ ವಿಳಂಬ ಮಾಡಿದ್ದು ಸರಿಯಲ್ಲ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆ. ಅಲ್ಪಕಾಲಿಕ ಟೆಂಡರ್‌ ಅವಧಿಯನ್ನೂ ಮತ್ತೆ ಏಳು ದಿನ ವಿಸ್ತರಿಸಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.