ADVERTISEMENT

ಬಸವನಪುರ ಕೆರೆ: ಮಾಯವಾಯ್ತು ಕೆರೆ ಕೋಡಿ ಹರಿದ ಖುಷಿ

ಬಸವನಪುರ ಕೆರೆ ಒಡಲಿಗೆ ಮತ್ತೆ ಸೇರುತ್ತಿದೆ ಶೌಚ ನೀರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:51 IST
Last Updated 6 ಆಗಸ್ಟ್ 2021, 3:51 IST
ಬಸವನಪುರ ಕೆರೆ ಒಡಲಿಗೆ ಒಳಚರಂಡಿಯ ಕೊಳಚೆ ನೀರು ಸೇರುತ್ತಿರುವುದು
ಬಸವನಪುರ ಕೆರೆ ಒಡಲಿಗೆ ಒಳಚರಂಡಿಯ ಕೊಳಚೆ ನೀರು ಸೇರುತ್ತಿರುವುದು   

ಬೆಂಗಳೂರು: ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಬಸವನಪುರ ಕೆರೆಯು ಮಳೆ ನೀರಿನಿಂದಲೇ ತುಂಬಿ ಕೋಡಿ ಹರಿದಾಗ, ಈ ಕೆರೆ ಉಳಿಸಲು ಹೋರಾಟ ನಡಸಿದ್ದ ಸ್ಥಳೀಯರು ಖುಷಿಯಲ್ಲಿ ತೇಲಿದ್ದರು. ಸ್ಥಳೀಯ ಶಾಸಕ ಬೈರತಿ ಬಸವರಾಜು ಅವರನ್ನು ಕರೆಸಿ ಕೆರೆಗೆ ಸೋಮವಾರ ಬಾಗಿನವನ್ನೂ ಅರ್ಪಿಸಿ ಸಂಭ್ರಮ ಪಟ್ಟಿದ್ದರು. ಆದರೆ, ಅವರ ಈ ಸಡಗರ ಮೂರೇ ದಿನದಲ್ಲಿ ಮರೆಯಾಗಿದೆ. ಈ ಕೆರೆಗೆ ಮತ್ತೆ ಒಳಚರಂಡಿಯ ಕೊಳಚೆ ನೀರು ಸೇರಲು ಶುರುವಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

18 ಎಕರೆ ವಿಸ್ತೀರ್ಣದ ಈ ವಿಶಾಲ ಕೆರೆಯನ್ನು ಐದು ವರ್ಷಗಳ ಹಿಂದೆ ಬಿಬಿಎಂಪಿಯು ₹ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಕೊಳಚೆ ನೀರಿನಿಂದ ಕಲುಷಿತಗೊಂಡಿದ್ದ ಈ ಜಲಕಾಯಕ್ಕೆ ಒಳಚರಂಡಿಯ ತ್ಯಾಜ್ಯ ನೀರು ಸೇರದಂತೆ ವ್ಯವಸ್ಥೆ ಕಲ್ಪಿಸಿತ್ತು. ಆ ಬಳಿಕ ಸ್ವತಂತ್ರನಗರ, ಕೊಡಿಗೆಹಳ್ಳಿ ರಸ್ತೆಗಳ ಪ್ರದೇಶದ ಮಳೆನೀರು ಮಾತ್ರ ಈ ಕೆರೆಗೆ ಹರಿದುಬರುತ್ತಿತ್ತು.

‘ಕೆರೆಯು ಈ ಬಾರಿಯ ಮಳೆಗೆ ಕೋಡಿ ಹರಿದಾಗ ಬಹಳ ಖುಷಿಯಾಗಿತ್ತು. ಮಳೆಯ ನೀರು ತಿಳಿಗೊಂಡು ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದ ಈ ಕೆರೆಯನ್ನು ಕಂಡು ಪುಳಕಗೊಂಡಿದ್ದೆವು. ಆದರೆ, ಎರಡು ದಿನಗಳಿಂದ ಒಳಚರಂಡಿಯ ಕೊಳಚೆ ನೀರು ಜಲಕಾಯಕ್ಕೆ ಹರಿದು ಬರುತ್ತಿದೆ. ನೀರಿನ ತಿಳಿ ಬಣ್ಣ ನಿಧಾನವಾಗಿ ಮತ್ತೆ ನೀಲಿ ಬಣ್ಣಕ್ಕೆ ತಿರುಗುತ್ತಿದೆ’ ಎಂದು ಸ್ಥಳೀಯರಾದ ಬಾಲಾಜಿ ರಘೋತ್ತಮ್‌ ಬಾಲಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈ ಕೆರೆ ಅಭಿವೃದ್ಧಿಗಾಗಿ ಸ್ಥಳೀಯರೆಲ್ಲ ಸೇರಿ ಸಾಕಷ್ಟು ಹೋರಾಟ ನಡೆಸಿದ್ದೇವೆ. ಕೆರೆಗೆ ಕೊಳಚೆ ನೀರು ಸೇರಬಾರದು ಎಂಬುದೇ ಸ್ಥಳೀಯರ ಮಹದಾಸೆಯಾಗಿತ್ತು. ಏನು ಆಗಬಾರದು ಎಂದು ಬಯಸಿದ್ದೆವೋ ಅದೇ ಆಗಿದೆ. ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಲು ಪ್ರತ್ಯೇಕ ಕಾಲುವೆ ನಿರ್ಮಿಸುವಾಗ ಅಧಿಕಾರಿಗಳು ಎಚ್ಚರ ವಹಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ಈ ಕೆರೆಯ ಭರ್ತಿಯಾದ ಬಳಿಕ ಇದರ ನೀರು ಸೀಗೇಹಳ್ಳಿ ಕೆರೆಗೆ ಸೇರಬೇಕು. ಆದರೆ, ಈ ಕೆರೆಗೆ ನೀರು ಸಾಗಿಸಬೇಕಾದ ರಾಜಕಾಲುವೆಗಳು ಮುಚ್ಚಿಹೋಗಿವೆ. ಈ ಕೆರೆಗೆ ಈ ಹಿಂದೆ ಯಾವ ದಿಕ್ಕಿನಲ್ಲಿ ಕೋಡಿ ಇತ್ತು ಎಂಬ ಬಗ್ಗೆಯೂ ಗೊಂದಲಗಳಿವೆ. ಸದ್ಯಕ್ಕೆ ಆಗ್ನೇಯ ಹಾಗೂ ನೈರುತ್ಯ ದಿಕ್ಕುಗಳಲ್ಲಿ ಕೆರೆ ಒಡಲಿಗೆ ನೀರು ತರುವ ಕಾಲುವೆಗಳಿವೆ. ಈ ಜಲಕಾಯದ ನೀರು ಹರಿವಿಗೆ ಹಿಂದೆ ಯಾವ ವ್ಯವಸ್ಥೆ ಇತ್ತು ಎಂಬುದನ್ನು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ತಿಳಿದುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಇಲ್ಲಿ ಈ ಹಿಂದೆ ಇದ್ದ ರಾಜಕಾಲುವೆಗಳನ್ನು ಪುನರುಜ್ಜೀವನಗೊಳಿಸಬೇಕು ಎಂಬುದು ಈ ಕೆರೆ ಉಳಿಸುವ ಕಳಕಳಿ ಹೊಂದಿರುವವರ ಒತ್ತಾಯ.

‘ಲೋಪ ಸರಿಪಡಿಸಲು ಶೀಘ್ರ ಕ್ರಮ’

‘ಈ ಕೆರೆಗೆ ಒಳಚರಂಡಿಯ ಕೊಳಚೆ ನೀರು ಹೇಗೆ ಸೇರುತ್ತಿದೆ ಎಂಬುದು ತಿಳಿಯುತ್ತಿಲ್ಲ. ಸ್ಥಳೀಯರಿಂದ ಈ ಕುರಿತು ದೂರು ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಜೆಸಿಬಿ ತರಿಸಿ ಅಗೆಸುವ ಮೂಲಕ ಲೋಪ ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದೇವೆ. ಜಲಮಂಡಳಿಯ ಎಂಜಿನಿಯರ್‌ಗಳನ್ನು ಕರೆಸಿ ಶುಕ್ರವಾರ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಲಿದ್ದೇವೆ. ಈ ಕೆರೆ ಒಡಲಿಗೆ ಮತ್ತೆ ಕೊಳಚೆ ನೀರು ಸೇರದಂತೆ ತಡೆಯಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ಮಳೆಯಾದ ಬಳಿಕ ಕೆರೆಯ ಮೇಲ್ಭಾಗದಲ್ಲಿ ಕೆಲವು ಕಡೆ ಒಳಚರಂಡಿ ತುಂಬಿ ನೀರುಹೊರಕ್ಕೆ ಹರಿಯುತ್ತಿತ್ತು. ಒಳಚರಂಡಿ ಕೊಳವೆ ಕಟ್ಟಿಕೊಂಡು ಸಮಸ್ಯೆ ಸೃಷ್ಟಿ ಆಗಿರಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.