ADVERTISEMENT

ಉಡುಪಿ ಕೃಷ್ಣ ಮಠಕ್ಕೆ ಆನೆ: ಆಕ್ಷೇಪಣೆಗೆ ಕೊನೆ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 15:59 IST
Last Updated 5 ನವೆಂಬರ್ 2025, 15:59 IST
   

ಬೆಂಗಳೂರು: ಹೆಣ್ಣಾನೆ ‘ಸುಭದ್ರೆ‘ಯ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಹೊನ್ನಾಳ್ಳಿಯ ಹಿರೇಕಲ್ಮಠ ಸಂಸ್ಥಾನ ಹಾಗೂ ಉಡುಪಿ ಶ್ರೀಕೃಷ್ಣ ಮಠದ ನಡುವಿನ ಪ್ರಕರಣದಲ್ಲಿ, ಆಕ್ಷೇಪಣೆ ಸಲ್ಲಿಸಲು ಶ್ರೀಕೃಷ್ಣ ಮಠಕ್ಕೆ ಹೈಕೋರ್ಟ್ ಕೊನೆಯ ಅವಕಾಶ ನೀಡಿದೆ.

ಈ ಸಂಬಂಧ ಸರ್ಕಾರದ ಆದೇಶ ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನದ ಅಧಿಕೃತ ಪ್ರತಿನಿಧಿ ಚನ್ನಬಸಪ್ಪ ಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇದೇ 27ರೊಳಗೆ ಆಕ್ಷೇಪಣೆ ಸಲ್ಲಿಸಬೇಕು’ ಎಂದು ಶ್ರೀಕೃಷ್ಣ ಮಠದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿದೆ.

ಅಂತೆಯೇ, ಸುಭದ್ರೆಯನ್ನು ಆತುರಾತುರವಾಗಿ ಸ್ಥಳಾಂತರ ಮಾಡದಂತೆ ಸೆಪ್ಟೆಂಬರ್ 23ರಂದು ನೀಡಿದ್ದ ಮಧ್ಯಂತರ ಆದೇಶವನ್ನು ನ್ಯಾಯಪೀಠ ವಿಸ್ತರಿಸಿ ಆದೇಶಿಸಿದೆ.

ADVERTISEMENT

‘ಸುಭದ್ರೆ’ಯನ್ನು 1993 ರಿಂದ 2019 ರವರೆಗೆ ಉಡುಪಿ ಶ್ರೀಕೃಷ್ಣ ಮಠದಿಂದ ಆರೈಕೆ ಮಾಡಲಾಗುತ್ತಿತ್ತು. ನಂತರ ಅದನ್ನು ಹಿರೇಕಲ್ಮಠ ಸಂಸ್ಥಾನಕ್ಕೆ ಸ್ಥಳಾಂತರಿಸಲಾಗಿತ್ತು. ಹಿರೇಕಲ್ಮಠ ಸಂಸ್ಥಾನಕ್ಕೆ ಸುಭದ್ರೆಯ ಮಾಲೀಕತ್ವದ ಪ್ರಮಾಣ ಪತ್ರವನ್ನೂ ನೀಡಲಾಗಿತ್ತು.

ಏತನ್ಮಧ್ಯೆ, ಸುಭದ್ರೆಯನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2025ರ ಸೆಪ್ಟೆಂಬರ್ 10ರಂದು ಆದೇಶ ಹೊರಡಿಸಿದ್ದರು. ಅಂತೆಯೇ, ಹಿರೇಕಲ್ಮಠಕ್ಕೆ ನೀಡಲಾಗಿದ್ದ ಸುಭದ್ರೆಯ ಮಾಲಿಕತ್ವದ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದರು. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದಾರೆ.