ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ಯುಗಾದಿ ಹಬ್ಬವನ್ನು ಭಾನುವಾರ ಸಡಗರದಿಂದ ಆಚರಿಸಲಾಯಿತು. ಪರಸ್ಪರ ಬೇವು–ಬೆಲ್ಲ ಹಂಚಿ ಸಂಭ್ರಮಿಸಿದರು.
ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕೆಲವು ದಿನಗಳಿಂದ ತಯಾರಿ ನಡೆದಿತ್ತು. ಮಾರುಕಟ್ಟೆಗೆ ತೆರಳಿ ಹೂವು ಹಣ್ಣುಗಳನ್ನು ತರಲಾಗಿತ್ತು. ಹೊಸ ಬಟ್ಟೆಗಳನ್ನು ಖರೀದಿಸಲಾಗಿತ್ತು. ಸೂರ್ಯ ಮೂಡುವ ಮುನ್ನವೇ ಯುಗಾದಿಯ ಸಂಭ್ರಮದ ವಾತಾವರಣ ಕಂಡುಬಂತು.
ಹೆಣ್ಣುಮಕ್ಕಳು ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಆಕರ್ಷಕ ರಂಗೋಲಿ ಬಿಡಿಸಿ ಹಬ್ಬಕ್ಕೆ ರಂಗು ತುಂಬಿದರು. ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬೇವಿನ ಚಿಗುರನ್ನು ಸಿಕ್ಕಿಸಿ ಮನೆ ಅಲಂಕಾರ ಮಾಡಿದರು.
ಎಣ್ಣೆ ಹಚ್ಚಿ ಸ್ನಾನ ಮಾಡಿದ ಬಳಿಕ ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಬೇವಿನ ಹೂವು, ಬೆಲ್ಲದೊಂದಿಗೆ ಬೆರೆಸಿ, ಮನೆಯವರಿಗೆ ಬಂಧುಮಿತ್ರರಿಗೆ ಹಂಚಿ, ಶುಭಾಶಯ ಕೋರಿದರು. ಮನೆದೇವರ ಪೂಜೆ ನೆರವೇರಿಸಿದರು. ಹೋಳಿಗೆ, ಪಾಯಸ ಸಹಿತ ಹಬ್ಬದೂಟ ಸವಿದರು.
ಸಂಜೆ ಇಸ್ಕಾನ್ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೆಲವು ದೇಗುಲಗಳಲ್ಲಿ ‘ಪಂಚಾಂಗ ಶ್ರವಣ’ವೂ ನಡೆಯಿತು.
ಸಂಜೆಯಾಗುತ್ತಿದ್ದಂತೆ ಸ್ನೇಹಿತರ, ಬಂಧು ಬಳಗದವರ ಮನೆಗೆ ತೆರಳಿ ಬೇವು–ಬೆಲ್ಲ ಕೊಟ್ಟು ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.