ADVERTISEMENT

ಯುಗಾದಿ ಹಬ್ಬ... ಖರೀದಿಯ ಹರ್ಷ

ಬೇವು–ಬೆಲ್ಲದ ಹಬ್ಬಕ್ಕೆ ಭರದ ಸಿದ್ಧತೆ l ಹೂಗಳ ಬೆಲೆ ದುಬಾರಿ, ತರಕಾರಿ ಬೆಲೆ ಸ್ಥಿರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:50 IST
Last Updated 21 ಮಾರ್ಚ್ 2023, 19:50 IST
ಬೆಂಗಳೂರಿನ ಕೆ.ಆರ್ ಮಾರ್ಕೆಟ್‌ನಲ್ಲಿ ಯುಗಾದಿ ಹಬ್ಬದ ಮುನ್ನಾದಿನವಾದ ಮಂಗಳವಾರ ಸಾರ್ವಜನಿಕರು ಮಾವು, ಬೇವಿನ ಸೊಪ್ಪು, ಹೂವು ಹಾಗೂ ಹಣ್ಣು ಖರೀದಿಯಲ್ಲಿ ತೊಡಗಿದ್ದರು    –ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರಿನ ಕೆ.ಆರ್ ಮಾರ್ಕೆಟ್‌ನಲ್ಲಿ ಯುಗಾದಿ ಹಬ್ಬದ ಮುನ್ನಾದಿನವಾದ ಮಂಗಳವಾರ ಸಾರ್ವಜನಿಕರು ಮಾವು, ಬೇವಿನ ಸೊಪ್ಪು, ಹೂವು ಹಾಗೂ ಹಣ್ಣು ಖರೀದಿಯಲ್ಲಿ ತೊಡಗಿದ್ದರು    –ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಬೇವು–ಬೆಲ್ಲದೊಂದಿಗೆ ಯುಗಾದಿ ಹಬ್ಬವನ್ನು ಆಚರಣೆ ಮಾಡಲು ನಗರದ ಜನ ಸಜ್ಜಾಗಿದ್ದಾರೆ. ಎರಡು ದಿನಗಳ ಹಬ್ಬದ ಆಚರಣೆಗೆ ಮಂಗಳವಾರದಿಂದಲೇ ಖರೀದಿ ಭರಾಟೆ ಜೋರಾಗಿ ನಡೆಯಿತು.

Caption

ನಗರದ ವಸ್ತ್ರ ಮಳಿಗೆಗಳು, ಆಭರಣದ ಮಳಿಗೆಗಳಲ್ಲೂ ಖರೀದಿ ಜೋರಾಗಿತ್ತು. ಹಬ್ಬ ಇರುವುದರಿಂದ ಕಳೆದ ಎರಡು–ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ದರಗಳು ಸಾಕಷ್ಟು ಏರಿಕೆಯಾಗಿವೆ. ನಗರದ ಹೊರಭಾಗಗಳಿಂದ ಮಾವು ಮತ್ತು ಬೇವಿನ ಸೊಪ್ಪನ್ನು ತಂದು ರಸ್ತೆ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದರು.

ಕೆ.ಆರ್‌.ಮಾರುಕಟ್ಟೆ, ಯಶವಂತ ಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯ ನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಹಬ್ಬದ ಖರೀದಿ ವೇಳೆ ಜನಜಂಗುಳಿ ಕಂಡುಬಂತು.

ADVERTISEMENT

ಹೂಗಳ ಬೆಲೆ ಗಗನಮುಖಿ: ‘ಹಬ್ಬದ ನಿಮಿತ್ತ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಹೂವಿನ ದರಗಳೆಲ್ಲ ಗಣನೀಯ ಏರಿಕೆ ಕಂಡಿದೆ’ ಎಂದು ಕೆ.ಆರ್. ಮಾರುಕಟ್ಟೆ ಹೂವಿನ ವ್ಯಾಪಾರಿಗಳಾದ ಗಂಗಾ ಮತ್ತು ನಾರಾಯಣ ತಿಳಿಸಿದರು.

‘ಹಬ್ಬದ ಸಂದರ್ಭದಲ್ಲಿ ಕನಕಾಂಬರದ ಗರಿಷ್ಠ ದರ ಪ್ರತಿ ಕೆ.ಜಿ.ಗೆ ₹1,200, ಮಲ್ಲಿಗೆ ಕೆ.ಜಿಗೆ ₹800 ಇದೆ. ಸೇವಂತಿಗೆ, ಗುಲಾಬಿ ಕೆ.ಜಿಗೆ ₹240, ಸುಗಂಧರಾಜ ಕೆ.ಜಿಗೆ ₹160 ಆಸುಪಾಸಿನಲ್ಲಿವೆ’ ಎಂದು ಅವರು ಮಾಹಿತಿ ನೀಡಿದರು.

‘ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಭೋಜನಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ.
ಬೆಂಗಳೂರು, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯುಗಾದಿಯು ಹೊಸ ತೊಡಕು ವಿಜೃಂಭಣೆಯಿಂದ ನಡೆಯು ತ್ತದೆ. ಈ ವೇಳೆ ಮಾಂಸದ ಬೆಲೆ ಗಗನಕ್ಕೇರುತ್ತದೆ. ಹಲವು ತರಕಾರಿಗಳ ದರಗಳು ಸ್ಥಿರವಾಗಿವೆ’ ಎಂದು ತರಕಾರಿ ವರ್ತಕಿ ಪುಟ್ಟಮ್ಮ
ತಿಳಿಸಿದರು.

ನಗರದ ಪ್ರಮುಖ ಬಡಾವಣೆಗಳಲ್ಲಿ ಹಬ್ಬದ ಪ್ರಯುಕ್ತ ಕಿರು ಮಾರುಕಟ್ಟೆಯ ರೀತಿಯಲ್ಲಿ ಮಳಿಗೆಗಳನ್ನು ತೆರೆಯಲಾ ಗಿದ್ದು, ಗ್ರಾಹಕರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.