ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಭಾರತೀಯ ಕಾಂಕ್ರೀಟ್ ಸಂಸ್ಥೆ(ಐಸಿಐ)- ಅಲ್ಟ್ರಾಟೆಕ್ ಪ್ರಶಸ್ತಿಗೆ ಭಾಜನವಾಗಿದೆ.
ಕೋರಮಂಗಲದಲ್ಲಿ ಅನುಷ್ಠಾನಗೊಳಿಸಲಾದ ‘ಥಿನ್ ವೈಟ್ ಟಾಪಿಂಗ್ (ಟಿಡಬ್ಲ್ಯುಟಿ)’ ಕಾಮಗಾರಿ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಈ ಗೌರವ ಸಂದಿದೆ.
ಕೋರಮಂಗಲ ಒಳ ವರ್ತುಲ ರಸ್ತೆ– ಎಂಪೈರ್ ರಸ್ತೆಯಿಂದ ಗಣಪತಿ ದೇವಸ್ಥಾನದವರೆಗೆ 1.1 ಕಿ.ಮೀ ಹಾಗೂ ಏಳನೇ ಅಡ್ಡರಸ್ತೆಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ನಿಂದ ವಿಪ್ರೋ ಪಾರ್ಕ್ ಸಿಗ್ನಲ್‌ವರೆಗೆ 1.17 ಕಿ.ಮೀ ಉದ್ದದ ರಸ್ತೆಗೆ ಹೊಸ ವಿನ್ಯಾಸದಲ್ಲಿ 125 ಎಂ.ಎಂ ದಪ್ಪದ ವೈಟ್ ಟಾಪಿಂಗ್ ಅನ್ನು 2023ರಲ್ಲಿ ಅನುಷ್ಠಾನಗೊಳಿಸಲಾಗಿತ್ತು.
ನಗರದಲ್ಲಿ ಸಾಮಾನ್ಯವಾಗಿ ವೈಟ್ ಟಾಪಿಂಗ್ ರಸ್ತೆಗಳಿಗೆ 180 ಎಂ.ಎಂ ದಪ್ಪದ ವಿನ್ಯಾಸ ಬಳಸಲಾಗುತ್ತಿತ್ತು. ಹೊಸ ಯೋಜನೆಯಲ್ಲಿ, ಜಿಬಿಎಯ (ಹಿಂದಿನ ಬಿಬಿಎಂಪಿ) ಎಂಜಿನಿಯರ್‌ಗಳ ತಂಡವು 125 ಎಂ.ಎಂ ದಪ್ಪದ ಹೊಸ ವಿನ್ಯಾಸವನ್ನು ಯಶಸ್ವಿಯಾಗಿ ರೂಪಿಸಿ, ಜಾರಿಗೊಳಿಸಿತ್ತು.
ಈ ವಿನ್ಯಾಸವು ನಗರದ ಸರ್ವತೋಮುಖ ಬೆಳವಣಿಗೆಯಲ್ಲಿ ಹಲವು ಸವಾಲುಗಳಿಗೆ ಸಮರ್ಥವಾದ ಉತ್ತರವಾಗಿದೆ. ರಸ್ತೆಗಳ ಎತ್ತರ, ಮಳಿಗೆಗಳು ಹಾಗೂ ನಿವಾಸಗಳ ಪ್ರವೇಶ ಮತ್ತು ಮಳೆಯ ನೀರಿನ ಹರಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಪರಿಹಾರವಾಗಿದೆ. ಜೊತೆಗೆ ಈ ಯೋಜನೆ ಅನುಷ್ಠಾನದಿಂದ ಹಣದ ಉಳಿತಾಯವೂ ಆಗಲಿದೆ ಎಂದು ಜಿಬಿಎ ತಿಳಿಸಿದೆ.
ಟಿಡಬ್ಲ್ಯುಟಿ ವಿನ್ಯಾಸ ಅನುಷ್ಠಾನಗೊಳಿಸಿದ ಮುಖ್ಯ ಎಂಜಿನಿಯರ್ ಎಂ. ಲೋಕೇಶ್, ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ. ಹೇಮಲತಾ, ಕಾರ್ಯಪಾಲಕ ಎಂಜಿನಿಯರ್ ಎ. ಸತ್ಯನಾರಾಯಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ. ವೀಣಾ ಅವರು ಪ್ರಶಸ್ತಿ ಸ್ವೀಕರಿಸಿದರು.
ಐಸಿಐ– ಬೆಂಗಳೂರು ಕೇಂದ್ರದ ಅಧ್ಯಕ್ಷ ಎಚ್.ಆರ್. ಗಿರೀಶ್, ಅಲ್ಟ್ರಾ ಟೆಕ್‌ನ ಮಾರುಕಟ್ಟೆ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ರಾಘವೇಂದ್ರ ದೇಸಾಯಿ, ಐಸಿಐ ಕಾರ್ಯದರ್ಶಿ ಬಿ.ಎಸ್ ಸಂತೋಷ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.