ದಂಡ
ಬೆಂಗಳೂರು: ಅನಧಿಕೃತ ಬಡಾವಣೆ ಹಾಗೂ ಅನುಮೋದಿತ ಬಡಾವಣೆಯಲ್ಲಿನ ನಕ್ಷೆ ಉಲ್ಲಂಘನೆಗೆ ಅನುವು ಮಾಡಿಕೊಡುವ ಅಧಿಕಾರಿಗಳಿಗೆ ₹50 ಸಾವಿರದಿಂದ ₹1 ಲಕ್ಷ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ಕ್ಕೆ ತಿದ್ದುಪಡಿ ತರಲಾಗಿದ್ದು, ‘ಕರ್ನಾಟಕ ಯೋಜನಾ ಪ್ರಾಧಿಕಾರ’ದ ಹೆಸರಿನಲ್ಲಿ ನಿಯಮಗಳನ್ನು ರೂಪಿಸಿದೆ. ಅನಧಿಕೃತ ಬಡಾವಣೆಗಳು ನಿರ್ಮಾಣವಾದರೆ ಯಾರ ಮೇಲೆ ಕ್ರಮ ಕೈಗೊಳ್ಳಬಹುದು ಎಂಬುದನ್ನು ಅವರ ವ್ಯಾಪ್ತಿಯನ್ನು ನಿರ್ಧರಿಸಿ ಅಧಿಸೂಚಿಸಲಾಗಿದೆ.
ಜವಾಬ್ದಾರಿ ನೀಡಲಾಗಿರುವ ಅಧಿಕಾರಿಯ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಹಾಗೂ ಬಡಾವಣೆ ನಿರ್ಮಾಣದಲ್ಲಿ ನಕ್ಷೆ ಉಲ್ಲಂಘಿಸಿದ ಪ್ರಕರಣಗಳಿದ್ದರೆ, ಅವರಿಗೆ ಮೊದಲ ಪ್ರಕರಣದಲ್ಲಿ ₹50 ಸಾವಿರ ದಂಡ ವಿಧಿಸಲಾಗುತ್ತದೆ. ನಂತರದ ಪ್ರಕರಣಕ್ಕೆ ₹1 ಲಕ್ಷ ದಂಡವನ್ನು ವಿಧಿಸಲಾಗುತ್ತದೆ. ಮೂರು ಹಾಗೂ ನಂತರ ಪ್ರಕರಣಗಳು ಕಂಡುಬಂದರೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳಂತೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವ ಅಧಿಕಾರಿಗೆ ಯಾವ ಹೊಣೆ ಎಂಬುದನ್ನೂ ನಿಯಮದಲ್ಲಿ ವಿವರಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ಇರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವಹಿಸಲಾಗಿದೆ. ಬಿಬಿಎಂಪಿ ಹೊರಗಿನ ಪ್ರದೇಶಗಳಲ್ಲಿ ಬಿಡಿಎ ಆಯುಕ್ತರು ಮತ್ತು ಆಯಾ ಸ್ಥಳೀಯ ಸಂಸ್ಥೆಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಹೊಣೆ ಹೊರಿಸಲಾಗಿದೆ. ಇವರ ಮೇಲೆ ಕ್ರಮ ಕೈಗೊಳ್ಳುವ, ದಂಡ ವಿಧಿಸುವ ಅಧಿಕಾರವನ್ನು ಬಿಎಂಆರ್‌ಡಿಎ ಮೆಟ್ರೊಪಾಲಿಟನ್ ಆಯುಕ್ತರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಲಾಗಿದೆ.
ನಗರ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಆಯುಕ್ತರು, ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಪ್ರಾಧಿಕಾರದ ಮುಖ್ಯ ಅಧಿಕಾರಿಗೆ ಅನಧಿಕೃತ ನಿರ್ಮಾಣಗಳನ್ನು ತಡೆಯುವ ಜವಾಬ್ದಾರಿ ನೀಡಲಾಗಿದೆ. ಇವರ ಮೇಲೆ ಕ್ರಮ ಕೈಗೊಳ್ಳುವ, ದಂಡ ವಿಧಿಸುವ ಅಧಿಕಾರವನ್ನು ಬಿಎಂಆರ್‌ಡಿಎ ಮೆಟ್ರೊಪಾಲಿಟನ್ ಆಯುಕ್ತರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಹಿಸಲಾಗಿದೆ.
ಬೆಂಗಳೂರು ಮೆಟ್ರೊಪಾಲಿಟನ್ ವಲಯ (ಬಿಎಂಆರ್) ಹೊರತುಪಡಿಸಿ ಪ್ರದೇಶಗಳಲ್ಲಿ, ಆಯಾ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯ ಅಧಿಕಾರಿ, ಪಿಡಿಒ, ಸ್ಥಳೀಯ ನಗರ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರಿಗೆ ಅನಧಿಕೃತ ನಿರ್ಮಾಣ ತಡೆಯುವ ಅಧಿಕಾರ ನೀಡಲಾಗಿದೆ. ಇವರು ವಿಫಲರಾದರೆ, ಅವರ ಮೇಲೆ ಕ್ರಮ ಹಾಗೂ ದಂಡ ವಿಧಿಸುವ ಹೊಣೆಯನ್ನು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ.
ಜವಾಬ್ದಾರಿ ಹೊಂದಿರುವ ಅಧಿಕಾರಿ ತನ್ನ ಮೇಲಿನ ದಂಡ ಹಾಗೂ ಶಿಸ್ತು ಕ್ರಮದ ಬಗ್ಗೆ 45 ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಈ ಬಗ್ಗೆ ಕೂಲಂಕಷವಾದ ವಿಚಾರಣೆ ನಡೆಸಿ, ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ 90 ದಿನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.