ADVERTISEMENT

ಅನಧಿಕೃತ ಬೋಧನೆ: ಆರ್ಕಿಡ್‌ ಶಾಲೆ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 22:06 IST
Last Updated 25 ಜನವರಿ 2023, 22:06 IST

ಬೆಂಗಳೂರು: ಮಾನ್ಯತೆ ಪಡೆಯದೆಯೇ ಸಿಬಿಎಸ್‌ಇ ಪಠ್ಯವನ್ನು ಬೋಧಿಸಿದ ಆರೋಪದಡಿ ನಾಗರಬಾವಿಯ ಆರ್ಕಿಡ್‌ ಇಂಟರ್‌ನ್ಯಾಷನಲ್‌ ಶಾಲೆ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ವಲಯ–1ರ ಬಿಇಒ ದೂರು ನೀಡಿದ್ದರು.

‘1ರಿಂದ 8ನೇ ತರಗತಿಯವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಶಾಲೆಯನ್ನು ನಡೆಸಲು ಆರ್ಕಿಡ್‌ ಇಂಟರ್‌ನ್ಯಾಷನಲ್‌
ಶಾಲೆಗೆ ಅನುಮತಿ ನೀಡಲಾಗಿತ್ತು. ಆದರೆ, ಈ ಶಾಲಾ ಆಡಳಿತ ಮಂಡಳಿ ಅನಧಿಕೃತವಾಗಿ ಸಿಬಿಎಸ್‌ಇ ಪಠ್ಯಕ್ರಮ ಬೋಧನೆ ಹಾಗೂ ಇಲಾಖೆಯ ಅನುಮತಿ ಇಲ್ಲದೆಯೇ 9 ಮತ್ತು 10ನೇ ತರಗತಿಗಳನ್ನು ನಡೆಸುತ್ತಿದೆ ಎಂದು ಅನುದಾನರಹಿತ ಶಾಲೆಗಳ ತಪಾಸಣೆಗೆ ನಿಯೋಜಿಸಲಾಗಿದ್ದ ತ್ರಿಸದಸ್ಯ ಸಮಿತಿ ವರದಿ ನೀಡಿತ್ತು. ಈ ಬಗ್ಗೆ ಶಾಲೆಗೆ ಎರಡು ಬಾರಿ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ಬಗ್ಗೆ ಉತ್ತರಿಸಿದ್ದ ಪ್ರಾಂಶುಪಾಲರು, ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿದ್ದು, ಮಕ್ಕಳ ಪೂರಕ ಕಲಿಕೆಗೆ ಇತರೆ ಪುಸ್ತಕಗಳನ್ನು ಬೋಧಿಸು
ತ್ತಿರುವುದಾಗಿ ಸಮಜಾಯಿಷಿ ನೀಡಿ ದ್ದರು. ಕಾನೂನುಬಾಹಿರವಾಗಿ ಸಿಬಿಎಸ್‌ಇ ಪಠ್ಯ ಬೋಧಿಸುತ್ತಿರುವ ಬಗ್ಗೆ ಪೋಷಕರು ಸಹ ಜ.24ರಂದು ದೂರು ನೀಡಿದ್ದರು’ ಎಂದು ಬಿಇಒ ದೂರಿನಲ್ಲಿ ತಿಳಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ, ಪ್ರಾಂಶುಪಾಲ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

‘ಕಾನೂನುಬಾಹಿರವಾಗಿ ಸಿಬಿಎಸ್‌ಇ ಪಠ್ಯ ಬೋಧಿಸಿದ್ದಕ್ಕಾಗಿ ಶಾಲೆ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಬೆಂಗಳೂರು ದಕ್ಷಿಣ ಡಿಡಿಪಿಐ ಬೈಲಾಂಜನಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.