
ಬೆಂಗಳೂರು: ಮಲ್ಲೇಶ್ವರದ ಎಂಟನೇ ಮುಖ್ಯರಸ್ತೆಯ ಏಳನೇ ಕ್ರಾಸ್‌ನಿಂದ 18ನೇ ಕ್ರಾಸ್‌ವರೆಗೆ ಸಂಪರ್ಕಿಸುವ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದ್ದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳು ಅಧ್ವಾನಗೊಂಡಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಡೀ ಪ್ರದೇಶ ದೂಳುಮಯವಾಗಿದ್ದು, ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಎಂಟನೇ ಮುಖ್ಯರಸ್ತೆಯ ಏಳನೇ ಕ್ರಾಸ್‌ನಿಂದ 11ನೇ ಕ್ರಾಸ್‌ವರೆಗಿನ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗಿದೆ. 12ನೇ ಕ್ರಾಸ್‌ನ ರಸ್ತೆಯಲ್ಲಿ ಒಂದು ಭಾಗದಲ್ಲಿ ಮಾತ್ರ ಕಾಮಗಾರಿ ನಡೆದಿದ್ದು, ಇನ್ನೊಂದು ಭಾಗ ಹಾಗೆಯೇ ಬಿಡಲಾಗಿದೆ. ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳನ್ನು ಅಗೆಯಲಾಗಿದೆ. ಸಾರ್ವಜನಿಕರು ಮುಖ್ಯ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಸ್ಕಾಂನವರು ಭೂಗತ ಕೇಬಲ್ ಹಾಗೂ ಜಲಮಂಡಳಿಯವರು ಕೊಳವೆಗಳನ್ನು ಅಳವಡಿಸಲು 13ನೇ ಕ್ರಾಸ್‌ನಿಂದ 15ನೇ ಕ್ರಾಸ್‌ವರೆಗಿನ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಗೆಯೇ ಬಿಡಲಾಗಿದೆ. ಕೆಲವು ಕಡೆ ಗುಂಡಿಗಳನ್ನು ತೆಗೆಯಲಾಗಿದೆ. ಗುಂಡಿ ಹಾಗೂ ಸ್ಲ್ಯಾಬ್‌ಗಳನ್ನು ತೆಗೆದಿರುವ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ರಸ್ತೆಯ ಮಧ್ಯದಲ್ಲಿಯೇ ಎಂ –ಸ್ಯಾಂಡ್ ರಾಶಿ ಹಾಕಲಾಗಿದೆ. ದ್ವಿಚಕ್ರ ವಾಹನಗಳು ಪಾದಚಾರಿ ಮಾರ್ಗದಲ್ಲಿ ಸಂಚರಿಸುತ್ತಿವೆ.
15ನೇ ಕ್ರಾಸ್‌ನಿಂದ 18ನೇ ಕ್ರಾಸ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಪಾದಚಾರಿ ಮಾರ್ಗಕ್ಕೆ ಪೇವರ್ಸ್‌ಗಳನ್ನು ಅಳವಡಿಸುವ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.
‘ಈ ರಸ್ತೆಯಲ್ಲಿ ಬೆಳಿಗ್ಗೆ ವೇಳೆ ಸಂಚರಿಸುವುದು ಒಂದು ರೀತಿಯ ದುಸ್ತರವಾದರೆ, ರಾತ್ರಿ ವೇಳೆ ಪಾದಚಾರಿಗಳು ನಡೆದಾಡುವುದೇ ಕಷ್ಟ. ಮಳೆ ಬಂದಾಗ, ಅಗೆದಿರುವ ಜಾಗ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ನಿತ್ಯ ದೂಳಿನ ಮಜ್ಜನವಾಗುತ್ತಿದ್ದು, ಆರೋಗ್ಯ ಹದಗೆಡುತ್ತಿದೆ. ಸಂಬಂಧಪಟ್ಟವರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರೂ, ಪ್ರಯೋಜನವಾಗುತ್ತಿಲ್ಲ. ಅಂಗಡಿಗಳ ಮುಂದೆ ದೊಡ್ಡ ಗುಂಡಿ ತೋಡಲಾಗಿದೆ. ಇದರಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳು ಬಿದ್ದು ಕಾಲು ಮುರಿದುಕೊಂಡಿದ್ದಾರೆ’ ಎಂದು ಸ್ಥಳೀಯ ವೃದ್ಧರೊಬ್ಬರು ದೂರಿದರು.
‘ಚೆನ್ನಾಗಿರುವ ರಸ್ತೆಯಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ 15 ತಿಂಗಳ ಹಿಂದೆಯೇ ಪೈಪ್‌ಲೈನ್, ಮಳೆ ನೀರು ಚರಂಡಿ ಮತ್ತು ಪಾದಚಾರಿ ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. 2025ರ ನವೆಂಬರ್ 30ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ಇಲ್ಲಿನ ವ್ಯಾಪಾರ–ವಹಿವಾಟಿಗೆ ಪೆಟ್ಟು ಬಿದ್ದಿದೆ. ಗ್ರಾಹಕರು ಬಾರದ ಕಾರಣ ಹಲವು ಅಂಗಡಿಗಳನ್ನು ಮುಚ್ಚಲಾಗಿದೆ’ ಎಂದು ಸ್ಥಳೀಯರಾದ ಪ್ರಸನ್ನಕುಮಾರ್ ಅಳಲು ತೋಡಿಕೊಂಡರು.
‘ಮಲ್ಲೇಶ್ವರದ ಎಂಟನೇ ಮುಖ್ಯರಸ್ತೆ ಏಳನೇ ಕ್ರಾಸ್‌ನಿಂದ 18ನೇ ಕ್ರಾಸ್‌ವರೆಗಿನ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಪಶ್ಚಿಮ ಪಾಲಿಕೆ ಎಂಜಿನಿಯರ್‌ವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಾರ್ವಜನಿಕರು ಏನಂತಾರೆ?
15 ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದ ವೈಟ್ ಟಾಪಿಂಗ್ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದ ಸ್ಥಳೀಯರಿಗೆ ನಿತ್ಯ ದೂಳಿನ ಮಜ್ಜನವಾಗುತ್ತಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.-ಪ್ರಸನ್ನಕುಮಾರ್ ಟೇಬಲ್ ಟೆನಿಸ್ ತರಬೇತುದಾರ
ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಗುತ್ತಿಗೆದಾರರು ರಸ್ತೆಯನ್ನು ಅಗೆಯುವುದು ಹಾಗೂ ಮುಚ್ಚುವ ಕೆಲಸ ಮಾಡುತ್ತಿದ್ದು ಕಾಮಗಾರಿಗೆ ವೇಗ ನೀಡುತ್ತಿಲ್ಲ. ಇದರಿಂದ ನಮ್ಮ ವ್ಯಾಪಾರ–ವಹಿವಾಟಿಗೆ ಧಕ್ಕೆ ಆಗಿದೆ..-ಚನ್ನಕೇಶವ್ ಕಿರಾಣಿ ಸ್ಟೋರ್ ಮಾಲೀಕ
13ನೇ ಕ್ರಾಸ್‌ನಿಂದ 15ನೇ ಕ್ರಾಸ್‌ವರೆಗಿನ ರಸ್ತೆಯನ್ನು 15 ತಿಂಗಳಲ್ಲಿ ನಾಲ್ಕು ಬಾರಿ ಅಗೆದಿದ್ದಾರೆ. ಕಾಮಗಾರಿ ಮಾತ್ರ ಮಾಡುತ್ತಿಲ್ಲ. ವಾಹನ ಸಂಚಾರಕ್ಕೆ ತುಂಬಾ ತೊಂದರೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.-ನಾರಾಯಣ್ ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.