ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ‘ಸಿ’ ದರ್ಜೆಯ ದೇವಸ್ಥಾನಗಳಿಗೆ ಇರುವ ತಸ್ತೀಕ್ ಮೊತ್ತವನ್ನು ₹ 5000 ದಿಂದ ₹ 10 ಸಾವಿರಕ್ಕೆ ಏರಿಸಬೇಕು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ‘ಸಿ’ ದರ್ಜೆಯ 36,217 ದೇವಸ್ಥಾನಗಳಿವೆ. ಬಹುತೇಕ ಎಲ್ಲವೂ ಗ್ರಾಮೀಣ ಪ್ರದೇಶದಲ್ಲಿವೆ. ಪೂಜೆಗಾಗಿ ಇದ್ದ ತಸ್ತೀಕ್ ಅನ್ನು ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ₹ 5000ಕ್ಕೆ ಹೆಚ್ಚಿಸಿದ್ದರು. ಆನಂತರ ಇಲ್ಲಿವರೆಗೆ ಹೆಚ್ಚಳವಾಗಿಲ್ಲ. ಪೂಜಾ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ತಸ್ತೀಕ್ ಮೊತ್ತವನ್ನೂ ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗೆ ಜೀವವಿಮೆ, ಆರೋಗ್ಯ ವಿಮೆ, ವಸತಿ ಸೌಕರ್ಯ ಒದಗಿಸಬೇಕು. ‘ಸಿ’ ದರ್ಜೆಯ ದೇವಸ್ಥಾನಗಳಿಗೆ ಪೂಜಾನಿಧಿ ಸ್ಥಾಪನೆ ಮಾಡಬೇಕು. ಅರ್ಚಕರ ಗೌರವ ನಿಧಿ ಆರಂಭಿಸಬೇಕು ಎಂದು ಒಕ್ಕೂಟದ ಗೌರವಾಧ್ಯಕ್ಷ ದಿನೇಶ್ ಗುಂಡೂರಾವ್, ಅಧ್ಯಕ್ಷ ರಾಧಾಕೃಷ್ಣ ಕೆ.ಇ., ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.