ADVERTISEMENT

ಉನ್ನತ ಶಿಕ್ಷಣ: ನೀತಿ ರೂಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 16:20 IST
Last Updated 13 ಆಗಸ್ಟ್ 2024, 16:20 IST
ಜಿ. ಜಗದೀಶ್‌
ಜಿ. ಜಗದೀಶ್‌   

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಲ್ಲಿ ಬೋಧಕರು, ಸಿಬ್ಬಂದಿ ಆಯ್ಕೆ, ಬಡ್ತಿ, ವರ್ಗಾವಣೆ, ವಿದ್ಯಾರ್ಥಿ ಕೇಂದ್ರಿತ ಸಂಗತಿಗಳ ಕುರಿತು ನೀತಿ ರೂಪಿಸುವಾಗ ಆಯಾ ಭಾಗೀದಾರರನ್ನು ಒಳಗೊಂಡ ಸಮಿತಿಗಳಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಚಿಂತನಾ ವೇದಿಕೆ ಹೇಳಿದೆ.

ಈ ಕುರಿತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ವೇದಿಕೆ ಸಂಚಾಲಕರಾದ ರಾಮಲಿಂಗಪ್ಪ ಟಿ. ಬೇಗೂರು, ಎಂ.ಡಿ. ಒಕ್ಕುಂದ ಅವರು, ವೇದಿಕೆಯ ಸಭೆಯಲ್ಲಿ ಭಾಗವಹಿಸಿದ ಎಲ್ಲ ಜಿಲ್ಲಾ ಪ್ರತಿನಿಧಿಗಳು, ಇಲಾಖೆಯ ಅಧ್ಯಾಪಕರ ಅನುಭವ ಮತ್ತು ಜ್ಞಾನವನ್ನು ಶಿಕ್ಷಣದ ಸುಧಾರಣೆಯ ವಿಚಾರಗಳಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು. 

ಕಾಲೇಜು ಶಿಕ್ಷಣದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸುವಾಗ ಮತ್ತು ಪರಿಷ್ಕರಣೆ ಮಾಡುವಾಗ ಹಾಗೂ ವರ್ಗಾವಣೆಯ ನಿಯಮಗಳನ್ನು ರೂಪಿಸುವಾಗ ಅಧ್ಯಾಪಕರನ್ನು ಒಳಗೊಂಡ ಸಮಿತಿ ನೇಮಿಸಬೇಕು. ಶಿಫಾರಸಿನಂತೆ ನಿಯಮಗಳ ತಿದ್ದುಪಡಿ ಮಾಡಬೇಕು. ಸ್ಥಾನೀಕರಣದ ಬದಲಿಗೆ ಬಡ್ತಿಗಳನ್ನು ನೀಡಬೇಕು. ಅದಕ್ಕಾಗಿ ವೃತ್ತಿ‌ ಪದೋನ್ನತಿ ಯೋಜನೆ ನಿಯಮಗಳ ತಿದ್ದುಪಡಿಗೆ ಅಧ್ಯಾಪಕರನ್ನು ಒಳಗೊಂಡ ಸಮಿತಿ ನೇಮಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಾಂಶುಪಾಲರ ನೇರ ನೇಮಕಾತಿಯ ಹೆಸರಿನಲ್ಲಿ ನಡೆಯುತ್ತಿರುವ ಅಂತರ ಇಲಾಖಾ ನೇಮಕಾತಿಯನ್ನು ತಡೆಯಬೇಕು. ಇಲಾಖೆಯ ಒಳಗಿನ ಅಧ್ಯಾಪಕರನ್ನು ಮಾತ್ರ ನೇಮಿಸಬೇಕು. ವಲಯವಾರು ಮತ್ತು ರಾಜ್ಯಮಟ್ಟದಲ್ಲಿ ಉನ್ನತ ಶಿಕ್ಷಣದ ಸಂರಚನೆ, ಸವಾಲುಗಳ ಕುರಿತು ವಿಚಾರಸಂಕಿರಣ, ಕಾರ್ಯಾಗಾರಗಳನ್ನು ಸಂಘಟಿಸಲು ಬೆಂಬಲ ನೀಡಬೇಕು ಎಂದು ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.