ADVERTISEMENT

‘ಉನ್ನತಿ’: ₹ 4.7 ಕೋಟಿ ಪ್ರೋತ್ಸಾಹ ಧನ

‘ಉನ್ನತಿ’ ಯೋಜನೆಯಡಿ 22 ನವೋದ್ಯಮಿಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:26 IST
Last Updated 31 ಮೇ 2019, 20:26 IST

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಪರಿಶಿಷ್ಟರಿಗೆ ನೆರವಾಗುವ ಸಲುವಾಗಿ ರೂಪಿಸಿರುವ ‘ಉನ್ನತಿ’ ಯೋಜನೆಯಲ್ಲಿಆಯ್ಕೆಯಾದ ನವೋದ್ಯಮಿಗಳಿಗೆ ಶುಕ್ರವಾರ ₹4.7 ಕೋಟಿ ಮೊತ್ತದ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಪರಿಶಿಷ್ಟ ಜಾತಿ ಹಾಗೂ ವರ್ಗದವರು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ, ಕೌಶಲ ಅಭಿವೃದ್ಧಿಗಾಗಿ ‘ಉನ್ನತಿ’ ಯೋಜನೆಯಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಉದ್ಯಮಿಗಳನ್ನು ಭೇಟಿಮಾಡಿ ಚರ್ಚಿಸಿ, 22 ಮಂದಿಗೆ ಚೆಕ್ ನೀಡಿದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆ ಈ ಯೋಜನೆ ರೂಪಿಸಿದೆ. ಪರಿಶಿಷ್ಟ ಜಾತಿ, ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ಆರಂಭಿಕ ಅಗತ್ಯತೆಗಳನ್ನು ಪೂರೈಸಲಿದೆ. ಆಯ್ಕೆಯಾದ ಉದ್ಯಮಿಗೆ ಗರಿಷ್ಠ ₹50 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ನವೋದ್ಯಮ ಆರಂಭಿಸಲು ಬಯಸುವವರಿಗೆ ಅಗತ್ಯ ಮಾಹಿತಿ, ಉತ್ಪನ್ನಗಳ ಪ್ರಾಯೋಗಿಕ ಪರಿಶೀಲನೆ, ಮೂಲ ಬಂಡವಾಳ ನೀಡಿಕೆ, ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತದೆ. ಈ ಯೋಜನೆಗಾಗಿ ₹20 ಕೋಟಿ ಅನುದಾನ ಒದಗಿಸಿದೆ.

ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಪ್ರಭಾವವನ್ನು ಬೀರುವ ಉತ್ಪನ್ನಗಳಿಗೆ ಆಸರೆ ಆಗುವಂತಹ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ನವೋದ್ಯಮಗಳಿಗೂ ಎರಡನೇ ಹಂತದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ.

‘ತಂತ್ರಜ್ಞಾನ ಕ್ಷೇತ್ರದ ಹೊಸ ಅನ್ವೇಷಣೆಗಳು ಪರಿಶಿಷ್ಟರನ್ನು ತಡವಾಗಿ ತಲುಪುವುದನ್ನು ನೋಡಿದ್ದೇವೆ’ ಎಂದು ಪರಮೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.