ಬೆಂಗಳೂರು: ಒಂದೆಡೆ ಬೇಟೆಯಾಡುತ್ತಿರುವ ಹುಲಿ–ಸಿಂಹ, ಹಿಮಚಿರತೆ ಕತ್ತೆಕಿರುಬಗಳ ಗುಂಪು, ಮತ್ತೊಂದೆಡೆ ಆನೆಯ ಗಾಂಭಿರ್ಯ ನಡಿಗೆ, ಪಕ್ಷಿಗಳ ಕಲರವ ಹಾಗೂ ಕೀಟಗಳು.. ಇಂಥ ಮನಮೋಹಕ ದೃಶ್ಯಗಳನ್ನು ತೆರೆದಿಡುವ ‘ವನ್ಯಜೀವಿ ಛಾಯಾಚಿತ್ರ ಪ್ರದರ್ಶನ’ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಅನಾವರಣಗೊಂಡಿತ್ತು.
ವನ್ಯಜೀವಿ ಛಾಯಾಗ್ರಾಹಕ ರುದ್ರಪಟ್ಣಂ ಎಸ್. ರಮಾಕಾಂತ್ ಸೆರೆಹಿಡಿದಿರುವ ಅಪರೂಪದ ವನ್ಯಜೀವಿ ಛಾಯಾಚಿತ್ರಗಳನ್ನು ‘ನಿಸರ್ಗ ವೈಭವ ಮತ್ತು ವಿಸ್ಮಯ’ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ. ಎರಡು ದಿನಗಳು ನಡೆದ ಈ ಏಕವ್ಯಕ್ತಿ ಚಿತ್ರ ಪ್ರದರ್ಶನವನ್ನು ನೂರಾರು ಮಂದಿ ವೀಕ್ಷಿಸಿದರು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಪ್ರಿಯರು, ವನ್ಯಜೀವಿ ಛಾಯಾಚಿತ್ರಗಳಿಗೆ ಮನಸೋತರು.
ಈ ಪ್ರದರ್ಶನದಲ್ಲಿ ವಿವಿಧ ಪ್ರಭೇದಗಳು, ವಿವಿಧ ವರ್ಗಗಳ ವನ್ಯಜೀವಿಗಳು, ಪಕ್ಷಿಗಳ ಅದ್ಭುತ ಛಾಯಾಚಿತ್ರಗಳಿವೆ. ಲಡಾಖ್‌ನ ಹೆಮಿಸ್ ರಾಷ್ಟ್ರೀಯ ಉದ್ಯಾನದಲ್ಲಿ ಹಿಮಚಿರತೆಯೊಂದು ಬೇಟೆಯಾಡುತ್ತಿರುವ ದೃಶ್ಯ ನೋಡಗರನ್ನು ಸೆಳೆದರೆ, ಮತ್ತೊಂದೆಡೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ಬೇಟೆಯಾಡುತ್ತಿರುವ ದೃಶ್ಯವಂತಹ ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ಮರ ಏರುತ್ತಿರುವ ದೃಶ್ಯ ವನ್ಯಜೀವಿ ಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತು.
ಪ್ರದರ್ಶನಕ್ಕೆ ಭೇಟಿ ನೀಡಿದರೆ ಹಿಮ ಕರಡಿ, ಆನೆಗಳು, ನರಿಗಳು, ಜೇಡಗಳು, ಜೀರುಂಡೆ ಕೀಟ ಮತ್ತು ವೈವಿಧ್ಯಮಯ ಪಕ್ಷಿ ಪ್ರಪಂಚವನ್ನು ಒಂದೇ ಸೂರಿನಡಿ ಕಣ್ತುಂಬಿಕೊಳ್ಳಬಹುದು. ವಿಶ್ವದ ಹಲವು ಸ್ಥಳಗಳಲ್ಲಿ ತೆಗೆದಿರುವ ವನ್ಯಜೀವಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನ ಭಾನುವಾರವೂ ನಡೆಯಲಿದೆ. ಫೆಡರೇಷನ್ ಆಫ್ ಇಂಡಿಯನ್ ಫೋಟೊಗ್ರಫಿಯ ಉಪಾಧ್ಯಕ್ಷ ಸಿ.ಆರ್. ಸತ್ಯನಾರಾಯಣ್ ಹಾಗೂ ವನ್ಯಜೀವಿ ಛಾಯಾಗ್ರಾಹಕ ದಿನೇಶ್ ಕುಂಬ್ಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.