ADVERTISEMENT

ಶಿಕ್ಷಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ: ಪುರುಷೋತ್ತಮ ಬಿಳಿಮಲೆ ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:36 IST
Last Updated 2 ಮೇ 2025, 15:36 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಶೀಘ್ರ ಭರ್ತಿ ಮಾಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಕನ್ನಡದ ಅಸ್ಮಿತೆಯಾಗಿದ್ದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದರಿಂದಾಗಿ ಶಾಲೆಗಳು ದುಸ್ಥಿತಿಗೆ ತಲುಪಿವೆ. ಸಾರ್ವಜನಿಕರ ಆಗ್ರಹಕ್ಕೆ ಮಣಿದು ಸಾವಿರಾರು ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ತಾಯ್ನುಡಿ ಶಿಕ್ಷಣದ ವೈಜ್ಞಾನಿಕ ಅಗತ್ಯವನ್ನು ಹಿನ್ನೆಲೆಗೆ ಸರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕನ್ನಡ ಕೇವಲ ಆಡುಭಾಷೆಯಾಗಿ ಉಳಿಯುವ ಅಪಾಯ ತಪ್ಪಿದ್ದಲ್ಲ’ ಎಂದು ಹೇಳಿದ್ದಾರೆ.

‘ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ, ಕಳೆದ ಸಾಲಿನಲ್ಲಿ 43 ಸಾವಿರ ಅತಿಥಿ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ. ಇದು ಬೋಧನಾ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಿಕ್ಷಕರ ಕೊರತೆ ನೀಗಿಸಬೇಕಾದದ್ದು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಅತಿಥಿ ಶಿಕ್ಷಕರಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ, ಶಿಕ್ಷಕರ ನೇಮಕಾತಿಗೆ ಸರ್ಕಾರವು ಮೊದಲ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಶತಮಾನ ಕಂಡ 3,500ಕ್ಕೂ ಅಧಿಕ ಸರ್ಕಾರಿ ಶಾಲೆಗಳಿದ್ದು, ಇವುಗಳ ಕಾಯಕಲ್ಪಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವರದಿಯನ್ನು ಸಿದ್ಧಪಡಿಸುತ್ತಿದೆ. ಈ ವರದಿಯನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಶತಮಾನ ಕಂಡ ಶಾಲೆಗಳ ಸಮಗ್ರ ಚಿತ್ರಣವನ್ನು ಈ ವರದಿ ಕಟ್ಟಿಕೊಡಲಿದ್ದು, ಶಾಲಾ ಶಿಕ್ಷಣ ಇಲಾಖೆಗೆ ಇದು ದಿಕ್ಸೂಚಿಯಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.