ADVERTISEMENT

US consulate in Bengaluru: ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 9:40 IST
Last Updated 17 ಜನವರಿ 2025, 9:40 IST
<div class="paragraphs"><p>ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌,&nbsp;ಅಮೆರಿಕ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್</p></div>

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಅಮೆರಿಕ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್

   

– ‍ಪಿಟಿಐ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಚೇರಿಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಅವರು ಶುಕ್ರವಾರ ಉದ್ಘಾಟಿಸಿದರು.

ADVERTISEMENT

ನಗರದ ವಿಠಲ್‌ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ಕಚೇರಿ ಆರಂಭವಾಗಿದ್ದು, ಭಾರತದಲ್ಲಿರುವ ಅಮೆರಿಕದ 5ನೇ ಕಾನ್ಸುಲೇಟ್‌ ಎನಿಸಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು.

ಕಾನ್ಸುಲೇಟ್‌ ಉದ್ಘಾಟಿಸಿ ಮಾತನಾಡಿದ ಎಸ್‌.ಜೈಶಂಕರ್‌, ‘ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಾರ್ಯಾರಂಭವು ಒಂದು ಮಹತ್ವದ ಮೈಲಿಗಲ್ಲು. ಬೆಂಗಳೂರಿನ ಜನರ ಬಹುದಿನಗಳ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ. ಇಲ್ಲಿನ ಜನರ ಜಾಗತಿಕ ಆಶೋತ್ತರಗಳಿಗೆ ಸ್ಪಂದಿಸಲು ಇದೊಂದು ಅಪೂರ್ವ ವೇದಿಕೆ’ ಎಂದರು.

ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಇದು ಬೆಂಗಳೂರು ಮತ್ತು ಕರ್ನಾಟಕದ ಜನರಿಗೆ ದೊಡ್ಡ ವಿಚಾರ. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ, ನಂತರ ವಿದೇಶಾಂಗ ಸಚಿವರಾದ ನಂತರ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಆರಂಭಕ್ಕೆ ಪ್ರಯತ್ನ ಆರಂಭಿಸಿದ್ದರು. ಅದು ಈಗ ಈಡೇರಿದೆ. ಇದು ಹಲವು ಶಾಸಕರು, ಸಂಸದರ ಪ್ರಯತ್ನದ ಫಲ. ಅಮೆರಿಕ ಮತ್ತು ಭಾರತದ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲಿದೆ’ ಎಂದರು.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ‘ನಮ್ಮ ಬೆಂಗಳೂರು ಅನ್ವೇಷಣೆ, ಸಂಶೋಧನೆ, ಅವಿಷ್ಕಾರದಲ್ಲಿ ಜಾಗತಿಕ ಪ್ರಾಮುಖ್ಯತೆಯ ನಗರವಾಗಿ ಹೊಮ್ಮಿದ್ದರೂ ನಗರದಲ್ಲಿ ಅಮೆರಿಕ ಕಾನ್ಸುಲೆಟ್ ಕಚೇರಿ ಇಲ್ಲದ್ದರಿಂದ ಕನ್ನಡಿಗರು ದೂರದ ಹೈದರಾಬಾದ್, ಚೆನ್ನೈಗೆ ಅಲೆಯುವ ಸಂದರ್ಭ ಎದುರಾಗಿತ್ತು. ಈ ಕಚೇರಿ ಪ್ರಾರಂಭ ಕೇವಲ ಅನುಕೂಲಕರ ದೃಷ್ಟಿಯಿಂದ ಅಷ್ಟೇ ಅಲ್ಲದೇ, ನಮ್ಮ ಬೆಂಗಳೂರನ್ನು ಜಾಗತಿಕ ಪ್ರಾಮುಖ್ಯ ಹೊಂದಿದ ನಗರಗಳ ಸಾಲಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದಿದ್ದಾರೆ.

ಈ ಕಚೇರಿಯು ಆರಂಭದಲ್ಲಿ ಅಮೆರಿಕ ಪ್ರಜೆಗಳ ಸಹಾಯ ಮತ್ತು ಇತರ ಸೇವೆಗಳ ಕೇಂದ್ರವಾಗಿ ಕೆಲಸ ಮಾಡಲಿದೆ. ನಂತರದ ದಿನಗಳಲ್ಲಿ ವೀಸಾ ಸೇವೆಯನ್ನೂ ಆರಂಭಿಸಲಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.