‘ರಾಷ್ಟ್ರೀಯ ವಿಜ್ಞಾನ ಸಮ್ಮೇಳನ’ದಲ್ಲಿ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥೆ ರೂಪಾಶ್ರೀ ಬಿ., ಪ್ರಾಚಾರ್ಯ ಭೀಮಸೇನ ಸೊರಗಾಂವ, ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ಧಾರವಾಡ ಐಐಟಿ ಡೀನ್ ಶಿವಪ್ರಸಾದ್ ಎಚ್.ಎಸ್., ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿದ್ಯಾಲಯದ ಜಂಟಿ ನಿರ್ದೇಶಕ ಮಹದೇವಸ್ವಾಮಿ ಎಚ್ ಭಾಗವಹಿಸಿದ್ದರು.
ಬೆಂಗಳೂರು: ಉಪಗ್ರಹಗಳ ಉಡಾವಣೆ ಆರಂಭವಾದ ಮೇಲೆ ಮಾನವಕುಲದ ಬೆಳವಣಿಗೆಯ ಗತಿಯೇ ಬದಲಾಯಿತು ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು.
ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಶನ್ ಆವರಣದಲ್ಲಿ ಆರಂಭವಾದ ಮೂರು ದಿನಗಳ ‘ರಾಷ್ಟ್ರೀಯ ವಿಜ್ಞಾನ ಸಮ್ಮೇಳನ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನವು ಶಿಲಾಯುಗದಿಂದ ಮಾಹಿತಿ ಯುಗದವರೆಗೆ ಬೆಳೆಯುತ್ತಾ ಬಂದಿದೆ. ಉಪಗ್ರಹ ಮತ್ತು ಸಂವೇದಕಗಳನ್ನು ಮನುಕುಲದ ಪ್ರಯೋಜನಕ್ಕಾಗಿ ವಿನ್ಯಾಸ ಮಾಡಲಾಗಿದೆ ಎಂದು ವಿವರಿಸಿದರು.
ಧಾರವಾಡ ಐಐಟಿ ಡೀನ್ ಎಸ್.ಎಂ. ಶಿವಪ್ರಸಾದ್ ಮಾತನಾಡಿ, ‘ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮತೋಲನಗೊಳಿಸುವುದರಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಎಚ್.ಆರ್. ಮಹದೇವಸ್ವಾಮಿ ಮಾತನಾಡಿ, ‘ರೋಬೋ, ಯಂತ್ರ, ತಂತ್ರಜ್ಞಾನಗಳು ಎಷ್ಟೇ ಬೆಳೆದರೂ ಮಾನವನ ಮೆದುಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದರು.
‘ಚಾಮರಾಜನಗರದ ಗ್ರಾವಿಟಿ ಸೈನ್ಸ್ ಫೌಂಡೇಶನ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮನೋವಿಜ್ಞಾನ ಅಧ್ಯಯನ ವಿಭಾಗದಿಂದ ತಾಂತ್ರಿಕ ಮಾತುಕತೆಗಳು ಮತ್ತು ಸ್ಟೆಮ್ (ಎಸ್‌ಟಿಇಎಂ) ಆಧಾರಿತ ಚಟುವಟಿಕೆಗಳ ಸರಣಿಯನ್ನು ನಡೆಸಲಾಗುವುದು. ವಿಜ್ಞಾನ ಮೇಳದಲ್ಲಿ 200ಕ್ಕೂ ಅಧಿಕ ಯೋಜನೆಗಳ ಪ್ರದರ್ಶನ ಇರಲಿದೆ’ ಎಂದು ಮೇಳದ ಸಂಚಾಲಕ ಮಹೇಶ್ ಬಿ. ತಿಳಿಸಿದರು.
ಸಹ ಸಂಯೋಜಕರಾದ ಚಾಮರಾಜನಗರದ ಗ್ರಾವಿಟಿ ಸೈನ್ಸ್ ಫೌಂಡೇಶನ್‌ನ ಅಭಿಷೇಕ್, ರಾಜ್ಯ ವೈಜ್ಞಾನಿಕ ಸಂಶೋಧನಾ ಮಂಡಳಿಯ ಹುಲಿಕಲ್ ನಟರಾಜ್, ಬೆಂಗಳೂರು ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎಂ. ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ.ಭೀಮಸೇನ ಸೋರಗಾಂವ, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥೆ ರೂಪಶ್ರೀ ಬಿ., ಸಹಾಯಕ ಪ್ರಾಧ್ಯಾಪಕಿ ಎಸ್. ಬಿಂದು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.