ADVERTISEMENT

ಯುವಿಸಿಇಗೆ ಪೂರ್ಣ ಸ್ವಾಯತ್ತ: ತಜ್ಞರ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 20:19 IST
Last Updated 24 ಜುಲೈ 2020, 20:19 IST

ಬೆಂಗಳೂರು: ಇಲ್ಲಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅನ್ನು (ಯುವಿಸಿಇ) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಹಾಗೂ ಅದಕ್ಕೆ ಶೈಕ್ಷಣಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಸ್ವಾಯತ್ತವನ್ನು ನೀಡಬೇಕು ಎಂದು ಉನ್ನತ ಮಟ್ಟದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿ ಪರವಾಗಿ ಪ್ರಶಾಂತ ಪ್ರಕಾಶ, ಡಾ.ಕೆ.ಆರ್. ವೇಣುಗೋಪಾಲ್ ಅವರು 112 ಪುಟಗಳ ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಶುಕ್ರವಾರ ಸಲ್ಲಿಸಿದರು.

ಯುವಿಸಿಇಯನ್ನು ಐಐಟಿ ಮಾದರಿಯ ಉತ್ಕೃಷ್ಟ ಸ್ವಾಯತ್ತ ಸಂಸ್ಥೆಯಾಗಿ ಅಭಿವೃದ್ಧಿ ‌ಮಾಡುವ ಸಂಬಂಧ ಐಐಐಟಿಬಿ ನಿರ್ದೇಶಕ ಡಾ. ಎಸ್. ಸಡಗೋಪನ್ ನೇತೃತ್ವದಲ್ಲಿ ಸಮಿತಿರಚಿಸಲಾಗಿತ್ತು. ಸಮಿತಿಯಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ. ಕೆ.ಆರ್‌.ವೇಣುಗೋಪಾಲ್, ಬಿ. ಮುತ್ತುರಾಮನ್, ಪ್ರಶಾಂತ್ ಪ್ರಕಾಶ್, ಬಿ.ವಿ. ಜಗದೀಶ್, ನಾಗಾನಂದ ದೊರೆಸ್ವಾಮಿ ಇದ್ದರು.

ADVERTISEMENT

ಶಿಫಾರಸುಗಳು ಏನೇನಿವೆ?: ಆರ್ಥಿಕ ಸ್ವಾಯತ್ತತೆ: ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸರ್ಕಾರದ ಮೇಲೆ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ಸೂಕ್ತವಾದ ಆರ್ಥಿಕ ಮಾದರಿಯೊಂದನ್ನು ಸಿದ್ಧಪಡಿಸಬೇಕು. ಆಂತರಿಕವಾಗಿ ಹಾಗೂ ಬಾಹ್ಯ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಅವಕಾಶ ನೀಡಬೇಕು. ದೇಣಿಗೆಗಳ ಸ್ವೀಕಾರ, ಹಳೆಯ ವಿದ್ಯಾರ್ಥಿಗಳಿಂದ ಹಣಕಾಸು ನೆರವು ಪಡೆಯಲು ಅವಕಾಶ ಕಲ್ಪಿಸಬೇಕು ಹಾಗೂ ಬೋಧಕ ಸಿಬ್ಬಂದಿಗೆ ಉತ್ತಮ ವೇತನ, ಟ್ಯೂಷನ್ ಫೀ ನಿಗದಿ ಮಾಡುವ ಅಧಿಕಾರವನ್ನು ಸಂಸ್ಥೆಗೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು.

ಶೈಕ್ಷಣಿಕ ಸ್ವಾಯತ್ತತೆ: ಉತ್ಕೃಷ್ಟ ಶೈಕ್ಷಣಿಕ ಹಿನ್ನೆಲೆಯ ಬೋಧಕರ‌ ನೇಮಕ,ಸಂಶೋಧನೆ ಹಾಗೂ ಮೂಲಸೌಕ
ರ್ಯಕ್ಕೆ ಆದ್ಯತೆ ನೀಡುವುದು, ಹೊಸ ರೀತಿಯ ಪಠ್ಯ ಸೇರ್ಪಡೆ, ಹೊಸ ಕೋರ್ಸುಗಳನ್ನು ಆರಂಭಿಸಲು ಸಂಸ್ಥೆಗೆ ಪೂರ್ಣ ಸ್ವಾಯತ್ತ ಕೊಡಬೇಕು.

ಆಡಳಿತಾತ್ಮಕ ಸ್ವಾಯತ್ತತೆ: ಆಡಳಿತದಲ್ಲಿ ಯುವಿಸಿಇಗೆ ಪೂರ್ಣ ಅಧಿಕಾರ ನೀಡುವುದರ ಜತೆಗೆ ಸ್ವತಂತ್ರ ಅಸ್ತಿತ್ವ ನೀಡಬೇಕು. ಆಡಳಿತದಲ್ಲಿ ವಿವಿಯದ್ದೇ ಅಂತಿಮ ನಿರ್ಧಾರವಾಗಬೇಕು. 11 ಸದಸ್ಯರ ಆಡಳಿತ ಮಂಡಳಿಯಲ್ಲಿ ಸರ್ಕಾರಕ್ಕೂ ಸಮಾನ ಪ್ರಾತಿನಿಧ್ಯ ಇರಬೇಕು. ಸರ್ಕಾರ, ಕೈಗಾರಿಕೆ, ಶೈಕ್ಷಣಿಕ ವಲಯದಿಂದ ತಲಾ ಮೂವರು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಇಬ್ಬರು ಸದಸ್ಯರು ಇರಬೇಕು ಎಂದು ಶಿಫಾರಸು ಮಾಡಲಾಗಿದೆ.

ಮುಂದಿನ 10 ವರ್ಷಗಳಲ್ಲಿ ಸಂಸ್ಥೆಯ ಬಜೆಟ್ ಗಾತ್ರವನ್ನು ₹700 ಕೋಟಿಗೆ ಹಿಗ್ಗಿಸಬೇಕು. ಕಾಲಕ್ರಮೇಣ ಶುಲ್ಕದಲ್ಲಿ ಪರಿಷ್ಕರಣೆ ಮಾಡಿ, ಅಂತಿಮವಾಗಿ ಐಐಟಿಗಳಲ್ಲಿ ಸಂಗ್ರಹ ಮಾಡುವಷ್ಟು ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕು ಎಂದು ಸಮಿತಿ ಹೇಳಿದೆ.

ವರದಿಯನ್ನು ಸಚಿವ ಸಂಪುಟದಮುಂದೆ ಇಟ್ಟು ಚರ್ಚೆ ಮಾಡಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.