ADVERTISEMENT

ಯುವಿಸಿಇ: ₹85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಹೊಸ ಬ್ಲಾಕ್‌ ನಿರ್ಮಾಣ

ಸಂಶೋಧನೆಗೆ ನೆರವಾಗಲು ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಆರಂಭಿಸಲು ನಿರ್ಧಾರ

ಎ.ಎಂ.ಸುರೇಶ
Published 1 ಡಿಸೆಂಬರ್ 2025, 23:21 IST
Last Updated 1 ಡಿಸೆಂಬರ್ 2025, 23:21 IST
<div class="paragraphs"><p>ಯುವಿಸಿಇಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಬ್ಲಾಕ್‌ &nbsp;</p></div>

ಯುವಿಸಿಇಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಬ್ಲಾಕ್‌  

   

ಪ್ರಜಾವಾಣಿ ಚಿತ್ರ: ರಂಜು ಪಿ

ಬೆಂಗಳೂರು: ಎರಡೂವರೆ ವರ್ಷಗಳ ಹಿಂದೆ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯಕ್ಕೆ (ಯುವಿಸಿಇ) ಅಗತ್ಯವಿರುವ ಅತ್ಯಾಧುನಿಕವಾದ ಹೊಸ ಬ್ಲಾಕ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ.

ADVERTISEMENT

ರಾಜಧಾನಿಯ ಹೃದಯ ಭಾಗದಲ್ಲಿರುವ ಯುವಿಸಿಇಯ ಪದವಿ ವಿಭಾಗದ ಎಂಟು ಹಾಗೂ ಸ್ನಾತಕೋತ್ತರ ವಿಭಾಗದ 24 ವಿಷಯಗಳಲ್ಲಿ ಸುಮಾರು 3,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹85 ಕೋಟಿ ವೆಚ್ಚದಲ್ಲಿ ನೂತನ ಬ್ಲಾಕ್‌ ನಿರ್ಮಿಸಲಾಗುತ್ತಿದೆ.

ಯುವಿಸಿಇ ಕ್ಯಾಂಪಸ್‌ ಒಟ್ಟು 12.5 ಎಕರೆ ಜಾಗವನ್ನು ಹೊಂದಿದೆ. ಈ ಪೈಕಿ 2.21 ಎಕರೆ ಜಾಗದಲ್ಲಿ ನೆಲಮಹಡಿ ಹೊರತುಪಡಿಸಿ ಒಟ್ಟು ಎಂಟು ಮಹಡಿಗಳನ್ನು ನಿರ್ಮಿಸಲಾಗುತ್ತಿದೆ. ಕೆಳಗೆ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ. 2022–23ರಲ್ಲಿ ಕಾಮಗಾರಿ ಆರಂಭವಾಗಿದ್ದು, ಮೊದಲ ಎರಡು ಮಹಡಿಯನ್ನು 2026ರ ಜನವರಿಗೆ ಹಾಗೂ ಉಳಿದ ಮಹಡಿಗಳ ನಿರ್ಮಾಣ ಕಾರ್ಯವನ್ನು 2026ರ ಜೂನ್‌ಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ರಾಜ್ಯ ಸರ್ಕಾರದ ಆರ್ಥಿಕ ನೆರವಿನಿಂದ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ₹51 ಕೋಟಿ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಕಟ್ಟಡ ನಿರ್ಮಾಣವಾದ ಬಳಿಕ ಸಂಶೋಧನೆ, ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಯುವಿಸಿಇ ಕುಲಸಚಿವ ಎ.ವಿ.ಶ್ರೀರಾಮ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೆಂಟರ್‌ ಆಫ್‌ ಎಕ್ಸಲೆನ್ಸ್‌:
ನೂತನ ಬ್ಲಾಕ್‌ನಲ್ಲಿ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಆರಂಭಿಸಲಾಗುತ್ತದೆ. ತ್ಯಾಜ್ಯ ನಿರ್ವಹಣೆ, ನಗರಗಳಲ್ಲಿ ಪ್ರವಾಹ ತಡೆಗಟ್ಟುವುದು, ಸಂಚಾರ ನಿರ್ವಹಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಅಗತ್ಯ ಸಲಹೆಗಳನ್ನು ನೀಡುವ ಕೆಲಸವನ್ನು ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಮೂಲಕ ಮಾಡಲಾಗುತ್ತದೆ.

‘ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಹೆಚ್ಚಿದಂತೆಲ್ಲ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿರುವವರು, ಅವರಿಗೆ ಮಾರ್ಗದರ್ಶನ ಮಾಡುತ್ತಿರುವವರು ಮಾಡಲಿದ್ದಾರೆ. ಇದರಿಂದ ಅವರಿಗೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ’ ಎಂದು ಅವರು ವಿಶ್ಲೇಷಿಸಿದರು.

‘ಮೆಕ್ಯಾನಿಕಲ್‌ ವಿಭಾಗದ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ಆಡಳಿತ ಮಂಡಳಿ ಕೊಠಡಿ, ಸಿಬ್ಬಂದಿ ಕೊಠಡಿ, ಸಭಾಂಗಣ, ಆಡಳಿತ ವಿಭಾಗ ಸೇರಿದಂತೆ ಎಲ್ಲದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಅನುಕೂಲವಾಗಲಿದೆ. ಇದಾದ ಬಳಿಕ ಕೊಠಡಿಗಳ ಕೊರತೆಯ ಪ್ರಶ್ನೆ ಉದ್ಭವಿಸುವುದಿಲ್ಲ’ ಎನ್ನುತ್ತಾರೆ ಶ್ರೀರಾಮ್‌.

ಯುವಿಸಿಇ ಅನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಇದನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರತ್ಯೇಕ ಗೊಳಿಸಿದ್ದು, 2023ರ ಏಪ್ರಿಲ್‌ 1ರಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 

ಮೈಸೂರಿನ ದಿವಾನರಾಗಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಅವರು 1917ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಇಲ್ಲಿ ವ್ಯಾಸಂಗ ಮಾಡಿದವರು ದೇಶ–ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹಳೆಯ ವಿದ್ಯಾರ್ಥಿಗಳು ಕೂಡ ಯುವಿಸಿಇಯ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತಿದ್ದು, ಸಣ್ಣಪುಟ್ಟ ನೆರವನ್ನೂ ನೀಡುತ್ತಿದ್ದಾರೆ.

ಹೊಸ ಕ್ಯಾಂಪಸ್‌ ನಿರ್ಮಾಣ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಹೊಸ ಕ್ಯಾಂಪಸ್‌ ನಿರ್ಮಾಣಕ್ಕೆ ಸರ್ಕಾರ 52 ಎಕರೆ ಜಾಗ ಮಂಜೂರು ಮಾಡಿದೆ. ಇದರ ನೀಲನಕ್ಷೆ, ಕಟ್ಟಡದ ನಕ್ಷೆ ಸಿದ್ಧಪಡಿಸುವ ಕೆಲಸಕ್ಕೆ ಸರ್ಕಾರ ₹6.5 ಕೋಟಿ ಮಂಜೂರು ಮಾಡಿದೆ. ಐಐಟಿ ಮಾದರಿಯಲ್ಲಿ ಯುವಿಸಿಇಯನ್ನು ಅಭಿವೃದ್ಧಿಪಡಿಸಲು ₹500 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ.

‘ಸರ್ಕಾರ ಘೋಷಿಸಿದ ಅನುದಾನ ಸಿಗುವ ವಿಶ್ವಾಸವಿದೆ. ಜ್ಞಾನಭಾರತಿಯಲ್ಲಿ ಹೊಸ ಕ್ಯಾಂಪಸ್‌ ನಿರ್ಮಾಣವಾದರೆ, ಈಗಿರುವ ಸಿವಿಲ್‌, ವಾಸ್ತುಶಿಲ್ಪ ವಿಭಾಗದ ವಿಸ್ತರಣೆಗೆ ಅನುಕೂಲವಾಗವಾಗಲಿದೆ. ಅಲ್ಲದೆ, ಅಲ್ಲೂ ಇನ್ನಷ್ಟು ಕೋರ್ಸ್‌ಗಳನ್ನು ಆರಂಭಿಸಬಹುದು’ ಎಂದು ಶ್ರೀರಾಮ್‌ ಅಭಿಪ್ರಾಯಪಟ್ಟರು.

ಹಲವು ವರ್ಷಗಳ ಪ್ರಯತ್ನ
ಪ್ರೊ. ಕೆ.ಆರ್‌.ವೇಣುಗೋಪಾಲ್‌ ಅವರು ಯುವಿಸಿಇ ಪ್ರಾಂಶುಪಾಲರಾಗಿದ್ದಾಗ ಹೊಸ ಬ್ಲಾಕ್‌ ನಿರ್ಮಾಣಕ್ಕೆ ಪ್ರಯತ್ನ ಆರಂಭಿಸಿದ್ದರು. ಆ ನಂತರ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾದಾಗ ಇದಕ್ಕೊಂದು ಸ್ಪಷ್ಟರೂಪ ಸಿಕ್ಕಿತ್ತು. ಒಟ್ಟು ಹತ್ತು ಮಹಡಿಗಳ ಬ್ಲಾಕ್‌ ನಿರ್ಮಾಣಕ್ಕೆ ಅವರ ಅವಧಿಯಲ್ಲಿ ನೀಲನಕ್ಷೆ ಸಿದ್ಧವಾಗಿತ್ತು. ಬಳಿಕ ಅದನ್ನು ಎಂಟು ಮಹಡಿಗೆ ಸೀಮಿತಗೊಳಿಸಲಾಯಿತು. ನನ್ನ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾ‍ಪನೆ ಮಾಡಲಾಯಿತು. ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವುದು ಸಂತಸದ ವಿಷಯ ಎಂದು ವೇಣುಗೋಪಾಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
  • ಯುವಿಸಿಇಗೆ 108 ವರ್ಷಗಳ ಇತಿಹಾಸ

  • ನೂತನ ಬ್ಲಾಕ್‌ಗೆ ₹85 ಕೋಟಿ ವೆಚ್ಚ

  • ಹಂತ ಹಂತವಾಗಿ ಅನುದಾನ ಬಿಡುಗಡೆ

ಯುವಿಸಿಇ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ನಮ್ಮ ಮನವಿಗಳಿಗೆ ಅಧಿಕಾರಿಗಳು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಯಾಗುವ ವಿಶ್ವಾಸವಿದೆ
ಎ.ವಿ.ಶ್ರೀರಾಮ್‌ ಕುಲಸಚಿವರು, ಯುವಿಸಿಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.