ADVERTISEMENT

ಕನ್ನಡದ ಪತಾಕೆ ರಾಷ್ಟ್ರಮಟ್ಟದಲ್ಲಿ ಹಾರಿಸಿದ ವಿ.ಕೃ.ಗೋಕಾಕ್‌: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 15:43 IST
Last Updated 10 ಆಗಸ್ಟ್ 2023, 15:43 IST
ವಿ.ಕೃ. ಗೋಕಾಕ ಅವರ ಭಾವಚಿತ್ರಕ್ಕೆ ಮಹೇಶ ಜೋಶಿ ಪುಷ್ಪ ನಮನ ಸಲ್ಲಿಸಿದರು. ಎನ್.ಎಸ್. ಶ್ರೀಧರ ಮೂರ್ತಿ ಹಾಗೂ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಇದ್ದಾರೆ.
ವಿ.ಕೃ. ಗೋಕಾಕ ಅವರ ಭಾವಚಿತ್ರಕ್ಕೆ ಮಹೇಶ ಜೋಶಿ ಪುಷ್ಪ ನಮನ ಸಲ್ಲಿಸಿದರು. ಎನ್.ಎಸ್. ಶ್ರೀಧರ ಮೂರ್ತಿ ಹಾಗೂ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಇದ್ದಾರೆ.   

ಬೆಂಗಳೂರು: ‘ಕನ್ನಡ ಸಾಹಿತ್ಯಕ್ಕೆ ಧೀಮಂತಿಕೆ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕ್‌ ಅವರು, ಕನ್ನಡದ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. 

ವಿ.ಕೃ. ಗೋಕಾಕ್‌ ಅವರ 114ನೇ ಜನ್ಮ ದಿನಾಚರಣೆ ಪ್ರಯುಕ್ತ ಕಸಾಪ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿ.ಕೃ. ಗೋಕಾಕ್‌ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಕನ್ನಡಿಗರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮೊದಲ ಕನ್ನಡಿಗರು ಇವರೇ ಆಗಿದ್ದರು. ವಾಸ್ತವವಾಗಿ ಮುಕ್ತ ಛಂದಸ್ಸು ಅದರ ಸಮಸ್ತ ಸಾಧ್ಯತೆಗಳೊಂದಿಗೆ ವೈವಿಧ್ಯವನ್ನೂ ಪಡೆದದ್ದು ಐವತ್ತರ ದಶಕದ ನವ್ಯಕಾವ್ಯದ ಸಂದರ್ಭದಲ್ಲಿ. ಈ ದೃಷ್ಟಿಯಿಂದ ನವ್ಯ ಕಾವ್ಯದಲ್ಲಿ ಪ್ರಯೋಗಗೊಂಡ ಈ ನೂತನ ಛಂದೋಭಿವ್ಯಕ್ತಿಯ ಪ್ರೇರಣೆ ನವ್ಯರಿಗೆ ದೊರೆತದ್ದು ಗೋಕಾಕ್ ಅವರ ‘ಸಮುದ್ರ ಗೀತೆಗಳು’ ಕೃತಿಯಿಂದ’ ಎಂದು ಸ್ಮರಿಸಿದರು. 

ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರ ಮೂರ್ತಿ, ‘ಗೋಕಾಕ್‌ ಸಾಹಿತ್ಯವೆಂದರೆ ಅದು ಪ್ರಯೋಗ ಪ್ರಪಂಚ. ಅದೇ ಅವರ ಸಾಹಿತ್ಯ ನಿರ್ಮಿತಿಯ ಬಹುಪಾಲನ್ನು ಒಳಗೊಳ್ಳುತ್ತದೆ. ಅವರು ಬರೆದ 1,268 ಪುಟಗಳ ‘ಸಮರಸವೇ ಜೀವನ’ ಕಾದಂಬರಿಯು ಕನ್ನಡದಲ್ಲಿಯೇ ಬೃಹತ್ ಗಾತ್ರದ ಕೃತಿ’ ಎಂದು ಹೇಳಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.