ADVERTISEMENT

ಬಿಬಿಎಂಪಿ | ಖಾಲಿ ನಿವೇಶನ: ಸ್ವಚ್ಛತೆಗೆ ಕ್ರಮ ಇಲ್ಲ

ಏಳು ತಿಂಗಳ ಹಿಂದೆ ಆದೇಶವಾದರೂ ನೋಟಿಸ್‌ ಜಾರಿಯಾಗಿಲ್ಲ, ದಂಡ ವಿಧಿಸಿಲ್ಲ

ಆರ್. ಮಂಜುನಾಥ್
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
ರಾಜರಾಜೇಶ್ವರಿನಗರದ ಪಟ್ಟಣಗೆರೆ ಮುಖ್ಯರಸ್ತೆಯಲ್ಲಿರುವ ನಿವೇಶನದಲ್ಲಿ ಬೆಳೆದಿರುವ ಗಿಡ–ಗಂಟಿ
ರಾಜರಾಜೇಶ್ವರಿನಗರದ ಪಟ್ಟಣಗೆರೆ ಮುಖ್ಯರಸ್ತೆಯಲ್ಲಿರುವ ನಿವೇಶನದಲ್ಲಿ ಬೆಳೆದಿರುವ ಗಿಡ–ಗಂಟಿ   

ಬೆಂಗಳೂರು: ನಗರದಲ್ಲಿರುವ ಖಾಲಿ ನಿವೇಶನಗಳ ಸ್ವಚ್ಛತೆಗೆ ಏಳು ದಿನಗಳ ಗಡುವು ನೀಡಿ, ಏಳು ತಿಂಗಳಾದರೂ, ನಿವೇಶನಗಳಲ್ಲಿ ತ್ಯಾಜ್ಯ, ಗಿಡ–ಗಂಟಿಗಳು ತೆರವಾಗಿಲ್ಲ. ನೆರೆಹೊರೆಯವರಿಗೆ ಸಂಕಷ್ಟ ಹೆಚ್ಚಾಗುತ್ತಿದೆ.

ಖಾಲಿ ನಿವೇಶನಗಳಲ್ಲಿರುವ ಗಿಡ–ಗಂಟಿ, ತ್ಯಾಜ್ಯ ತೆರವು ಮಾಡಲು ಮಾಲೀಕರಿಗೆ ನೋಟಿಸ್‌ ಜಾರಿ ಮಾಡಬೇಕು. ಒಂದು ವಾರದಲ್ಲಿ ಅವರು ಕ್ರಮ ಕೈಗೊಳ್ಳದಿದ್ದರೆ, ಪಾಲಿಕೆಯಿಂದಲೇ ತೆರವು ಕಾರ್ಯಾಚರಣೆ ಮಾಡಿ, ಅದರ ವೆಚ್ಚ ಮತ್ತು ದಂಡವನ್ನು ಆಸ್ತಿ ತೆರಿಗೆಯಲ್ಲಿ ಸೇರಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು 2024ರ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದ್ದರು.

ಖಾಲಿ ನಿವೇಶನಗಳಿಂದ ತ್ಯಾಜ್ಯ ವಿಲೇವಾರಿಗಾಗಿ, ಮಾಲೀಕರಿಂದ ಆಸ್ತಿ ತೆರಿಗೆಯಲ್ಲಿ ದಂಡ ಮತ್ತು ವಿಲೇವಾರಿಗೆ ತಗುಲಿದ ವೆಚ್ಚ ಸಂಗ್ರಹಿಸಲು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016, ಘನತ್ಯಾಜ್ಯ ನಿರ್ವಹಣೆ ಬೈ-ಲಾ 2020 ಮತ್ತು ಬಿಬಿಎಂಪಿ ಕಾಯ್ದೆ 2020ರ ಅಡಿಯಲ್ಲಿ ಹೊಸ ಆದೇಶ ಹೊರಡಿಸಲಾಗಿತ್ತು. ಆದರೆ, ಈ ಬಗ್ಗೆ ನಗರದ ಬಹುತೇಕ ಭಾಗಗಳಲ್ಲಿ ಕ್ರಮವಾಗಿಲ್ಲ.

ADVERTISEMENT

ನಗರದ ಹಲವು ಭಾಗಗಳಲ್ಲಿ ಖಾಲಿ ನಿವೇಶನಗಳು ಸ್ವಚ್ಛವಾಗಿಲ್ಲ. ಕೆಲವರು ಕಾಂಪೌಂಡ್‌ ನಿರ್ಮಿಸಿದ್ದರೂ ಅದರಲ್ಲೂ ಸ್ವಚ್ಛತೆ ಇಲ್ಲ. ಪಕ್ಕದ ಪ್ರದೇಶದವರೋ ಅಥವಾ ವಾಹನಗಳಲ್ಲಿ ಹೋಗುವವರೋ ತ್ಯಾಜ್ಯವನ್ನು ಎಸೆದು ಹೋಗಿರುತ್ತಾರೆ. ಗಿಡ–ಗಂಟಿಗಳು ಬೆಳೆದುಕೊಂಡಿರುತ್ತವೆ. ತ್ಯಾಜ್ಯ ಇರುವುದರಿಂದ ನಾಯಿ, ಬೆಕ್ಕು, ಇಲಿ–ಹೆಗ್ಗಣಗಳ ಕಾಟ ಹೆಚ್ಚಾಗಿದೆ. ಕೆಲವು ಪ್ರದೇಶಗಳಲ್ಲಿ ಖಾಲಿ ನಿವೇಶನಗಳು ಹಾವುಗಳ ತಾಣವೂ ಆಗಿದ್ದು, ನೆರೆಹೊರೆಯವರಿಗೆ ಆತಂಕ ಸೃಷ್ಟಿಯಾಗಿದೆ.

‘ನಮ್ಮ ಬಡಾವಣೆ ಹಾಗೂ ಸುತ್ತಮುತ್ತ ಸಾಕಷ್ಟು ಖಾಲಿ ನಿವೇಶನಗಳಿವೆ. ಈ ನಿವೇಶನಗಳಲ್ಲಿ ಎಲ್ಲೆಲ್ಲಿಂದಲೋ ತ್ಯಾಜ್ಯ ತಂದು ಬಿಸಾಡಿ ಹೋಗಿರುತ್ತಾರೆ. ಗಿಡ–ಗಂಟಿಗಳು ಬೆಳೆದುಕೊಂಡಿವೆ. ಇದರಿಂದ ನೆರೆಹೊರೆ ನಿವಾಸಿಗಳಿಗೆ ದುರ್ನಾತದ ಜೊತೆಗೆ, ಬೀದಿನಾಯಿಗಳು ಆಹಾರಕ್ಕಾಗಿ ಕಿತ್ತಾಡುತ್ತಿರುತ್ತವೆ. ತ್ಯಾಜ್ಯವನ್ನು ಯಾರೂ ತೆಗೆಯುತ್ತಿಲ್ಲ. ಬಿಬಿಎಂಪಿಯವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಆರ್.ಆರ್‌. ನಗರದ ಜಯಣ್ಣ ಬಡಾವಣೆಯ ಟಿ.ಇ. ಶ್ರೀನಿವಾಸ್‌ ದೂರಿದರು.

‘ನಮ್ಮ ಮನೆಗೆ ಹೊಂದಿಕೊಂಡಂತೆ ಖಾಲಿ ನಿವೇಶನವಿದೆ. ಅಲ್ಲಿ ಕಸ ಬಿಸಾಡುತ್ತಾರೆ. ಸುತ್ತಮುತ್ತಲು ಕಟ್ಟಡ ನಿರ್ಮಿಸುವವರು ಅಲ್ಲಿನ ತ್ಯಾಜ್ಯವನ್ನು ರಾತ್ರೋರಾತ್ರಿ ತಂದು ಸುರಿದಿರುತ್ತಾರೆ. ಯಾರೂ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ನಿವೇಶನದ ಮಾಲೀಕರನ್ನು ಕೇಳಿದರೆ, ಕಳೆದ ತಿಂಗಳು ಸ್ವಚ್ಛಗೊಳಿಸಿದ್ದೆ, ನಾನೇನು ಮಾಡಲಿ ಎನ್ನುತ್ತಾರೆ. ಖಾಲಿ ನಿವೇಶನದ ಸ್ವಚ್ಛತೆ ಬಗ್ಗೆ ಬಿಬಿಎಂಪಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು’ ಉಲ್ಲಾಳು ಮುಖ್ಯರಸ್ತೆಯ ಗೌಡಯ್ಯ ಅವರು ಆಗ್ರಹಿಸಿದರು.

ಕೈಗೊಳ್ಳಬೇಕಾದ ಕ್ರಮಗಳೇನು?

  •  ಖಾಲಿ ನಿವೇಶನದಲ್ಲಿನ ತ್ಯಾಜ್ಯ ತೆಗೆದುಹಾಕಲು ಅಥವಾ ತೆರವುಗೊಳಿಸಲು  ಏಳು ದಿನಗಳ ನಿರ್ದಿಷ್ಟ ಅವಧಿಯನ್ನು ಸೂಚಿಸಿ ಮಾಲೀಕರಿಗೆ ನೋಟಿಸ್‌ ನೀಡಬೇಕು

  • ಮಾಲೀಕರು ನಿರ್ದೇಶನಗಳನ್ನು ಪಾಲಿಸಲು ವಿಫಲರಾದರೆ, ಪಾಲಿಕೆಯಿಂದ ನಿವೇಶನದಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಬೇಕು. ಅದರ ವೆಚ್ಚ ಮತ್ತು ದಂಡವನ್ನು ಆಸ್ತಿ ತೆರಿಗೆಯ ಬೇಡಿಕೆ ಸೂಚನೆಯಲ್ಲಿ ಪ್ರತ್ಯೇಕ ಕೋಷ್ಠಕದಲ್ಲಿ ನಮೂದಿಸಿ ಏಳು ದಿನಗಳೊಳಗೆ ಆಸ್ತಿ ಮಾಲೀಕರಿಗೆ ನೀಡಬೇಕು.

  • ದಂಡ ಮತ್ತು ವೆಚ್ಚವನ್ನು ಆಸ್ತಿ ತೆರಿಗೆಯ ಪುಸ್ತಕಗಳಲ್ಲಿ ನಮೂದಿಸಬೇಕು. ಆಸ್ತಿ ತೆರಿಗೆ ಸಂಗ್ರಹಣೆಯೊಂದಿಗೆ ಬಾಕಿ ಮೊತ್ತ ಎಂದು ನಮೂದಿಸಿ, ಸಂಗ್ರಹಿಸಬೇಕು.

  • ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲವಾದಲ್ಲಿ ವಲಯ ಆಯುಕ್ತರು ಅನ್ವಯಿತ ಬಡ್ಡಿಯನ್ನೂ ವಿಧಿಸಬೇಕು.

‘ವಲಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’
‘ಆರೋಗ್ಯ ವಿಭಾಗಕ್ಕೆ ತ್ಯಾಜ್ಯ ವಿಲೇವಾರಿ ನಿರ್ವಹಣೆ ಜವಾಬ್ದಾರಿ ಈಗಿಲ್ಲ. ನಿವೇಶನಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಕ್ರಮ ಕೈಗೊಳ್ಳಬೇಕು. ಮಾಲೀಕರಿಗೆ ಸ್ಥಳೀಯ ಎಂಜಿನಿಯರ್‌ಗಳು ನೋಟಿಸ್‌ ನೀಡಿ, ಅವರಿಂದ ದಂಡ, ತೆರವು ವೆಚ್ಚ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ವಲಯ ಆಯುಕ್ತರು ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರೊಳ್ಕರ್‌ ವಿಕಾಸ್ ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.