ADVERTISEMENT

ಲಸಿಕೆ ಪಡೆಯಲು ತೃತೀಯ ಲಿಂಗಿಗಳ ಹಿಂದೇಟು

ಜಾಗೃತಿ ಕೊರತೆ, ಹಾರ್ಮೋನ್‌ನಲ್ಲಿ ಅಸಮತೋಲನ ಆಗುವ ಭಯ

ವಿಜಯಕುಮಾರ್ ಎಸ್.ಕೆ.
Published 21 ಜೂನ್ 2021, 22:38 IST
Last Updated 21 ಜೂನ್ 2021, 22:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಾಗೃತಿಯ ಕೊರತೆ, ಹಾರ್ಮೊನ್‌ಗಳಲ್ಲಿ ಅಸಮತೋಲನ ಆಗುವ ಭಯದಿಂದ ಕೋವಿಡ್ ಲಸಿಕೆ ಪಡೆಯಲು ತೃತೀಯ ಲಿಂಗಿಗಳು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ, ಎಷ್ಟು ತೃತೀಯಲಿಂಗಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿಯೇ ಕೋವಿನ್‌(cowin.gov.in) ಪೋರ್ಟಲ್‌ನಲ್ಲಿ ಲಭ್ಯವಿಲ್ಲ.

ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಇಲ್ಲದ ಕಾರಣ ಸಾಮಾನ್ಯ ಜನರೇ ಭಯದಿಂದ ಸಂಪೂರ್ಣವಾಗಿ ಹೊರಗೆ ಬಂದಿಲ್ಲ. ಲಿಂಗ ಪರಿವರ್ತನೆ ಮಾಡಿಸಿಕೊಂಡವರಲ್ಲಿ ಲಸಿಕೆ ಪಡೆದರೆ ಹಾರ್ಮೋನ್‌ನಲ್ಲಿ ವ್ಯತ್ಯಾಸ ಆಗಬಹುದೇ ಎಂಬ ಭಯ ಆವರಿಸಿದೆ. ‘ಮದ್ಯಪಾನ, ಗುಟ್ಕಾ ಸೇವನೆಯಂತಹ ದುಶ್ಚಟ ಕೂಡ ಇವರನ್ನು ಕಾಡುತ್ತಿರುವ ಕಾರಣ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ’ ಎಂದು ಸಮುದಾಯದ ಮುಖಂಡರು ಹೇಳುತ್ತಾರೆ.

‘ಲಿಂಗ ಪರಿವರ್ತನೆ ಆದ ಕೆಲ ದಿನಗಳ ಕಾಲ ಮತ್ತು ಆ ಪ್ರಕ್ರಿಯೆಯಲ್ಲಿ ಇರುವವರಿಗೆ ಹಾರ್ಮೋನ್‌ ಥೆರಪಿ ನಡೆಯುತ್ತಿರುತ್ತದೆ. ಲಸಿಕೆ ಪಡೆಯುವ ಒಂದು ವಾರ ಮುಂಚೆ ಮತ್ತು ಲಸಿಕೆ ಪಡೆದ ಒಂದು ತಿಂಗಳ ತನಕ ಈ ಥೆರಪಿಗೆ ಒಳಗಾಗುವಂತಿಲ್ಲ. ಈ ಬಗ್ಗೆ ನಿಖರವಾದ ಮಾಹಿತಿಯನ್ನು ಸರ್ಕಾರ ಪ್ರಚಾರ ಮಾಡದ ಕಾರಣ ನಮ್ಮ ಸಮುದಾಯ ಭಯದಿಂದ ಹೊರಗೆ ಬಂದಿಲ್ಲ’ ಎಂದು ಎಲ್‌ಜಿಬಿಟಿ ಕಾರ್ಯಕರ್ತೆ ಅಕೈ ಪದ್ಮಶಾಲಿ ಹೇಳಿದರು.

ADVERTISEMENT

‘ಸಾಮಾನ್ಯ ಜನರಲ್ಲಿ ಇರುವ ಭಯಕ್ಕಿಂತ ಮೂರು ಪಟ್ಟು ಭಯ ನಮ್ಮ ಸಮುದಾಯದವರಲ್ಲಿ ಇದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದೆ ಎಂಬ ಆತಂಕದಿಂದ ಬಹುತೇಕರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ’ ಎಂದು ಅವರು ಹೇಳಿದರು.

‘ಲಾಕ್‌ಡೌನ್ ಸಂದರ್ಭದಲ್ಲಿ ದುಡಿಮೆಯೇ ಇಲ್ಲದೆ ಹೊಟ್ಟೆಪಾಡಿಗೆ ಪರದಾಡಬೇಕಾದ ಸ್ಥಿತಿ ಇತ್ತು. ಈ ಸಂದರ್ಭದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ, ಲಸಿಕೆ ಬಗ್ಗೆ ಸಮುದಾಯದವರು ಯೋಚಿಸುತ್ತಿಲ್ಲ. ಇಂತಹ ಶೋಚನೀಯ ಸಂದರ್ಭದಲ್ಲಿ ತೃತೀಯ ಲಿಂಗಿಗಳಿಗೆ ಜೀವನ ನಡೆಸಲು ಬೇಕಾದ ಸಹಕಾರ ನೀಡುವ ಜತೆಗೆ ಅವರಲ್ಲಿ ಜಾಗೃತಿ ಮೂಡಿಸಿ ಕೋವಿಡ್ ಲಸಿಕೆ ನೀಡಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

‘ಈ ಕೆಲಸವನ್ನು ಸರ್ಕಾರ ಸಮರ್ಪಕವಾಗಿ ಮಾಡಿಲ್ಲ. ಈ ಬಗ್ಗೆ ಇ–ಮೇಲ್ ಮಾಡಿದ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಡಾ. ವೈಷ್ಣವಿ ಮತ್ತು ಡಾ. ರವೀಂದ್ರ ಅವರನ್ನು ನೇಮಿಸಿದರು. ಅವರ ಪ್ರಯತ್ನದ ಫಲವಾಗಿ ಕೆಂಗೇರಿ, ದಾಸರಹಳ್ಳಿ, ಹೆಬ್ಬಾಳ, ಬ್ಯಾಟರಾಯನಪುರ, ಜಯನಗರದಲ್ಲಿ ಒಂದಷ್ಟು ಜನರಿಗೆ ಇತ್ತೀಚೆಗೆ ಲಸಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ವಿಕ್ಟೋರಿಯಾ ಆಸ್ಪತ್ರೆ, ನಿಮ್ಹಾನ್ಸ್, ಎಂ.ಎಸ್. ರಾಮಯ್ಯ ಆಸ್ಪತ್ರೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ನಾವೂ ಮಾಡುತ್ತಿದ್ದೇವೆ. ನಾವು ಲಸಿಕೆ ಪಡೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಭಯ ಹೋಗಲಾಡಿಸುವ ಕೆಲಸ ಮಾಡುತ್ತಿದ್ದೇವೆ. ವ್ಯಾಪಕವಾಗಿ ಪ್ರಚಾರ ಮಾಡುವ ಕೆಲಸ ಸರ್ಕಾರದ್ದು’ ಎಂದರು.

ವಿಶೇಷ ಕಾರ್ಯಾಚರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಗಳಿಗೆ ಕೋವಿಡ್‌ ಲಸಿಕೆ ಕೊಡಿಸಲು ವಿಶೇಷ ಕಾರ್ಯಾಚರಣೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯ ವಿಶೇಷಾಧಿಕಾರಿ ಡಾ. ವೈಷ್ಣವಿ ಮಾಡುತ್ತಿದ್ಧಾರೆ.

ಕೇವಲ ಲಸಿಕೆ ಪಡೆಯಲು ಕರೆದರೆ ಹಿಂದೇಟು ಹಾಕುತ್ತಿರುವ ಕಾರಣ ಸ್ಥಳೀಯ ಮುಖಂಡರು, ಸ್ವಯಂಸೇವಾ ಸಂಸ್ಥೆಗಳನ್ನು ಸಂಪರ್ಕಿಸಿ ಅವರಿಂದ ದಿನಸಿ ಕಿಟ್‌ ಕೊಡಿಸುವ ಮೂಲಕ ಆ ಸಮುದಾಯದವರನ್ನು ವಿಶ್ವಾಸಕ್ಕೆ ಪಡೆದು ಬಳಿಕ ಅವರಿಗೆ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.

‘ಲಸಿಕೆ ಬಗ್ಗೆ ಅವರಿಗೆ ತಿಳಿವಳಿಕೆ ಕೊರತೆ ಇದೆ. ಮೊದಲು ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಬಳಿಕ ಅವರಿಗೆ ತಿಳಿವಳಿಕೆ ನೀಡಿ ಆರೋಗ್ಯ ಸೇವೆ ನೀಡಬೇಕು. ಆ ಕೆಲಸ ಮಾಡುತ್ತಿದ್ದೇನೆ. ಈ ಸಮುದಾಯದವರಿಗೆ ಲಸಿಕೆ ಕೊಡಿಸುವುದು ಒಳ್ಳೆಯ ಕೆಲಸ ಎಂದು ನಂಬಿದ್ದೇನೆ’ ಎಂದು ವೈಷ್ಣವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.