ADVERTISEMENT

ಮುಂಗಾರಿಗೆ ಮುನ್ನ ‘ವಚನ ಕಲ್ಯಾಣ’

ಕಲಾಗ್ರಾಮದಲ್ಲಿ ತಲೆ ಎತ್ತಲಿವೆ 12ನೇ ಶತಮಾನದ ಊರು ಕೇರಿಗಳು: 9 ಗಂಟೆ ರಂಗಪ್ರಯೋಗ

ವರುಣ ಹೆಗಡೆ
Published 23 ಫೆಬ್ರುವರಿ 2020, 19:55 IST
Last Updated 23 ಫೆಬ್ರುವರಿ 2020, 19:55 IST
ಸಿ.ಬಸವಲಿಂಗಯ್ಯ
ಸಿ.ಬಸವಲಿಂಗಯ್ಯ   

ಬೆಂಗಳೂರು: ಮುಂಗಾರು ಮಳೆಗೂ ಮುನ್ನವೇ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ವಚನ ಕಲ್ಯಾಣ’ ರಂಗ ಪ್ರಯೋಗ ನಡೆಯಲಿದ್ದು,ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ಸಿದ್ಧರಾಮ, ಮಡಿವಾಳ ಮಾಚೀದೇವ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ 300ಕ್ಕೂ ಹೆಚ್ಚು ಶಿವಶರಣ– ಶರಣೆಯರ ಪಾತ್ರಗಳು ರಂಗದಲ್ಲಿ ಕಾಣಿಸಿಕೊಳ್ಳಲಿವೆ. ಸುಮಾರು‌13 ಎಕರೆ ಪ್ರದೇಶದಲ್ಲಿ 12ನೇ ಶತಮಾನದ ಊರು ಕೇರಿಗಳು ತಲೆ ಎತ್ತಲಿವೆ.

ಕುವೆಂಪು ಅವರ ಕಾದಂಬರಿ ಆಧಾರಿತ ‘ಮಲೆಗಳಲ್ಲಿ ಮದುಮಗಳು’ ರಂಗಪ್ರಯೋಗವು 100 ಪ್ರದರ್ಶನಗಳನ್ನು ಪೂರೈಸಿ, ಯಶಸ್ವಿಯಾಗಿ ಸಾಗುತ್ತಿದೆ. ಇದೇ 29ಕ್ಕೆ 109ನೇ‍ಪ್ರದರ್ಶನ ನಡೆಸುವ ಮೂಲಕ ಈ ಪ್ರಯೋಗಕ್ಕೆ ತೆರೆ ಎಳೆಯುವುದಾಗಿರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಘೋಷಿಸಿದೆ. ಇದರ ನಡುವೆಯೇ ಎನ್‌ಎಸ್‌ಡಿ ಭಾರಿ ರಂಗ ಪ್ರಯೋಗಕ್ಕೆ ಸಿದ್ಧತೆಯನ್ನು ಪ್ರಾರಂಭಿಸಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಅಗತ್ಯ ಸಹಕಾರವನ್ನು ನೀಡಿದ್ದು, ಶೀಘ್ರದಲ್ಲಿಯೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಬಯಲು ವೇದಿಕೆಯಲ್ಲಿ ಈ ರಂಗ ಪ್ರಯೋಗವನ್ನು ಮಾಡುವುದರಿಂದ ಮಳೆ ಬಂದಲ್ಲಿ ಪ್ರದರ್ಶನಕ್ಕೆ ಅಡ್ಡಿಯಾಗುವ ಜತೆಗೆ ಸೆಟ್‌ಗಳು ಹಾಳಾಗಲಿವೆ. ಹಾಗಾಗಿ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಪ್ರದರ್ಶನ ನಡೆಸಲು ಎನ್‌ಎಸ್‌ಡಿ ನಿರ್ಧರಿಸಿದೆ.

‘ಮಲೆಗಳಲ್ಲಿ ಮದುಮಗಳು’ ರಂಗ ಪ್ರಯೋಗಕ್ಕೆ 50 ಕಲಾವಿದರನ್ನು ಬಳಸಿಕೊಳ್ಳಲಾಗಿತ್ತು. ಆದರೆ, ಇದರಲ್ಲಿ ಕಲಾವಿದರ ಸಂಖ್ಯೆ ಮೂರು ಪಟ್ಟು ಜಾಸ್ತಿ. ಅದೇ ರೀತಿ, ಪೂರ್ಣ ವೀಕ್ಷಣೆಗೆ ಐದು ವೇದಿಕೆಗಳಿಗೆ ಸಾಗಬೇಕಾಗುತ್ತದೆ.ಕೆ.ವೈ.ನಾರಾಯಣಸ್ವಾಮಿ ಈಗಾಗಲೇ 300 ಪುಟಗಳ ಸಂಭಾಷಣೆಯನ್ನು ಸಿದ್ಧಪಡಿಸಿದ್ದು, ಇದನ್ನು ಪರಿಷ್ಕರಿಸಲಾಗುತ್ತಿದೆ.

ADVERTISEMENT

ಯುವಜನತೆಗೆ ಅರಿವು: ‘ಬಿಜ್ಜಳನ ಆಸ್ಥಾನ, ಅನುಭವ ಮಂಟಪ ಹಾಗೂ ವಿವಿಧ ಕೇರಿಗಳನ್ನು ನಿರ್ಮಿಸಲಾಗುತ್ತದೆ. ಜನರನ್ನು ಮಾನಸಿಕವಾಗಿಯೂ ಒಂಬತ್ತು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುವ ಸವಾಲು ನಮ್ಮ ಮುಂದಿದೆ. ಸೆಟ್‌ಗಳನ್ನು ನಿರ್ಮಿಸಲು
₹ 20 ಲಕ್ಷ ವೆಚ್ಚವಾಗಲಿದೆ. ಕಲಾವಿದರಿಗೆ ವೇತನ, ಸಂಗೀತ ಸೇರಿದಂತೆ ವಿವಿಧ ವೆಚ್ಚಗಳು ಇರುವುದರಿಂದಇನ್ನೂ ₹ 25 ಲಕ್ಷ ಬಿಡುಗಡೆಗೊಳಿಸುವಂತೆ ಇಲಾಖೆಗೆ ಮನವಿ ಮಾಡಿದ್ದೇವೆ’ ಎಂದು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘12ನೇ ಶತಮಾನದ ಶಿವಶರಣ– ಶರಣೆಯರು ಹಾಗೂ ಅವರು ಸಾರಿದ ತತ್ವ ಚಿಂತನೆಗಳನ್ನು ಈಗಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ರಂಗ‍ಪ್ರಯೋಗವನ್ನು ಕೈಗೆತ್ತಿಕೊಂಡಿದ್ದೇವೆ.ಧರ್ಮ, ಜಾತಿ ಸೇರಿದಂತೆ ಸಮಾಜವನ್ನು ಕಾಡುತ್ತಿರುವ ಹಲವು ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳಲು ಈ ರಂಗ ಪ್ರಯೋಗ ಸಹಕಾರಿಯಾಗಲಿದೆ’ ಎಂದರು.

ಸಂದರ್ಶನದ ಮೂಲಕ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಈ ರಂಗ ಪ್ರಯೋಗದಿಂದ 12ನೇ ಶತಮಾನದ ಚಿಂತನೆಗಳು ಮುನ್ನೆಲೆಗೆ ಬರಲಿವೆ..
-ಸಿ.ಬಸವಲಿಂಗಯ್ಯ, ಎನ್‌ಎಸ್‌ಡಿ ನಿರ್ದೇಶಕ

ಅಂಕಿ ಅಂಶ

150 -ಪಾಲ್ಗೊಳ್ಳುವ ಕಲಾವಿದರು

360 - ನಾಟಕದಲ್ಲಿ ಬರುವ ಶರಣ–ಶರಣೆಯರು

9 ಗಂಟೆ - ರಂಗ ಪ್ರಯೋಗದ ಅವಧಿ

5 - ನಾಟಕ ನಡೆಯುವ ವೇದಿಕೆಗಳು

₹ 1.30 ಕೋಟಿ -ಪ್ರದರ್ಶನದ ಒಟ್ಟು ವೆಚ್ಚ

25 -ನಾಟಕದ ಪ್ರದರ್ಶನಗಳು

₹ 75 ಲಕ್ಷ -ಇಲಾಖೆ ನೀಡಿರುವ ಅನುದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.