ADVERTISEMENT

ವಚನ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಸವಾಲು: ಎಚ್‌.ಎಸ್‌. ವೆಂಕಟೇಶಮೂರ್ತಿ

ಧ್ವನಿಸುರುಳಿಗಳ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 21:33 IST
Last Updated 3 ಸೆಪ್ಟೆಂಬರ್ 2022, 21:33 IST
ನಗರದಲ್ಲಿ ಶನಿವಾರ ನಡೆದ ಧ್ವನಿಸುರುಳಿಗಳ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (ಎಡದಿಂದ ಮೂರನೇಯವರು) ವಚನ ದರ್ಶನ ಧ್ವನಿಸುರುಳಿ ಬಿಡುಗಡೆ ಮಾಡಿದರು. (ಎಡದಿಂದ) ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ, ರಮಣಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಷಡಕ್ಷರಿ, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಲಹರಿ ಮ್ಯೂಸಿಕ್ಸ್ ನಿರ್ದೇಶಕ ಲಹರಿ ವೇಲು ಇದ್ದರು -      –ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ನಡೆದ ಧ್ವನಿಸುರುಳಿಗಳ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (ಎಡದಿಂದ ಮೂರನೇಯವರು) ವಚನ ದರ್ಶನ ಧ್ವನಿಸುರುಳಿ ಬಿಡುಗಡೆ ಮಾಡಿದರು. (ಎಡದಿಂದ) ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ, ರಮಣಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಷಡಕ್ಷರಿ, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಲಹರಿ ಮ್ಯೂಸಿಕ್ಸ್ ನಿರ್ದೇಶಕ ಲಹರಿ ವೇಲು ಇದ್ದರು -      –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಚನ ಸಾಹಿತ್ಯಕ್ಕೆ ಸಂಗೀತ ಸಂಯೋಜನೆಯು ಸವಾಲಿನ ಕೆಲಸ’ ಎಂದು ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಹೇಳಿದರು.

ನಗರದಲ್ಲಿ ಶನಿವಾರ ಡಾ.ಸಿ.ಸೋಮಶೇಖರ, ಎಸ್‌.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಲಹರಿ ಮ್ಯೂಸಿಕ್‌ ಸಹಯೋಗದಲ್ಲಿ ನಡೆದ ‘ವಚನ ದರ್ಶನ’ ಧ್ವನಿ ಸುರುಳಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ವಚನ ಸಾಹಿತ್ಯ ಎಂಬುದು ಮಾತಿನ ಸಾಹಿತ್ಯ. ಆದರೆ, ಇತ್ತೀಚೆಗೆ ವಚನ ಸಾಹಿತ್ಯವನ್ನು ಲಯಬದ್ಧವಾಗಿ ಹಾಡಲಾಗುತ್ತಿದೆ. ಸಿನಿಮಾ ರಂಗದವರೂ ವಚನ ಸಾಹಿತ್ಯ ಬಳಸಿಕೊಂಡು ಜನರಿಗೆ ತಲುಪಿಸಿದರು. ಅನೇಕ ಗಾಯಕರು ವಚನ ಸಾಹಿತ್ಯವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು. ಸಿ. ಅಶ್ವತ್ಥ್‌ ಹೊಸ ಪ್ರಯೋಗದ ಮೂಲಕವೇ ಜನರ ಮನ ಗೆದ್ದಿದ್ದರು. ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಾವಿರ ಗಾಯಕರನ್ನು ಸೇರಿಸಿ ಹಾಡಿಸಿದ್ದರು’ ಎಂದು ಹೇಳಿದರು.

ADVERTISEMENT

‘ಈಗ ಹೊರತಂದಿರುವ ಧ್ವನಿಸುರುಳಿಯಲ್ಲಿ 10 ಉತ್ಕೃಷ್ಟ ಹಾಡುಗಳಿವೆ. ಉಳಿದ 10 ವಚನ ಗಾಯನ ಕೇಳಿದರೆ ಮನಸ್ಸಿಗೆ ಸಂತೋಷ ಆಗಲಿದೆ’ ಎಂದು ಹೇಳಿದರು.

ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಮಾತನಾಡಿ, ‘ವಚನ ಸಾಹಿತ್ಯ ವಿಶೇಷ ಕೊಡುಗೆ ನೀಡಿದೆ. ವಚನ ಸಾಹಿತ್ಯವು ಹೊಗಳಿಕೆ, ಪಾಂಡಿತ್ಯ ಪ್ರದರ್ಶನ, ಅಕ್ಷರದ ಚಮತ್ಕಾರ ಅಲ್ಲ. ಶರಣರ ಅನುಭವದ ರಸಧಾರೆ; ಶುದ್ಧರಸ ಗಂಗೆ. ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಭಾಗವಾಗದಿದ್ದರೆ ವಿಶ್ವ ಸಾಹಿತ್ಯಕ್ಕೆ ಅಪಾರ ನಷ್ಟ ಉಂಟಾಗುತ್ತಿತ್ತು’ ಎಂದು ಪ್ರತಿಪಾದಿಸಿದರು.

‘ವಚನ ಸಾಹಿತ್ಯದ ಉದ್ದೇಶವೇ ಮಾನವ ಕಲ್ಯಾಣ. ಶ್ರೇಷ್ಠ ಗುಣಾತ್ಮಕ ಮೌಲ್ಯವನ್ನೂ ಇಟ್ಟುಕೊಂಡಿದೆ. ವಚನ ಸಾಹಿತ್ಯವು ಜನಸಾಮಾನ್ಯರ ನಾಲಿಗೆಯ ಮೇಲೆ ಹರಿದಾಡಲಿ ಎಂಬ ಉದ್ದೇಶದಿಂದ ಎರಡು ಧ್ವನಿ ಸುರುಳಿ ಹೊರತರಲಾಗಿದೆ’ ಎಂದರು

ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ‘ವಚನದಲ್ಲಿ ಸತ್ವ ಇದೆ. 12ನೇ ಶತಮಾನದ ಬಸವಣ್ಣ ಇಂದಿಗೂ ಪ್ರಸ್ತುತ. ಅವರ ವಚನಗಳು ಶಕ್ತಿಯುತವಾಗಿವೆ. ಅವುಗಳಲ್ಲಿ ಸತ್ವ ಹಾಗೂ ಅರ್ಥ ಇದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಮಣಶ್ರೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಷಡಕ್ಷರಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಲಹರಿ ಮ್ಯೂಸಿಕ್‌ನ ಲಹರಿ ವೇಲು ಇದ್ದರು. ಇದಕ್ಕೂ ಮೊದಲು ವಚನ ನೃತ್ಯ ವೈಭವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.