
ಬೆಂಗಳೂರು: ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯನ್ನು ಮಂಗಳವಾರ ಭಕ್ತಿಭಾವದಿಂದ ಆಚರಿಸಲಾಯಿತು.
ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇವಸ್ಥಾನಗಳು, ಮುಂಜಾನೆಯೇ ಬಾಗಿಲು ತೆರೆದಿದ್ದವು. ವೈಕುಂಠ ದ್ವಾರದ ಮೂಲಕ ಸಾಗಿದ ಭಕ್ತರು, ಸರದಿಯಲ್ಲಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿಗಳಿಗೆ ಸಾಕ್ಷಿಯಾದರು. ಭಜನೆ, ವಿಷ್ಣು ಸಹ್ರನಾಮ ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ದೇವಸ್ಥಾನಗಳಲ್ಲಿ ಹೂವು-ವಿದ್ಯುತ್ ದೀಪಗಳಿಂದ ವೈಕುಂಠ ದ್ವಾರ ನಿರ್ಮಿಸಲಾಗಿತ್ತು.
ವೆಂಕಟೇಶ್ವರನ ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರಪುಷ್ಪ ಸೇವೆ, ಅಷ್ಟಾವಧಾನ ಸೇವೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಇಸ್ಕಾನ್, ಕೋಟೆ ವೆಂಕಟರಮಣ, ಜೆ.ಪಿ. ನಗರದ ತಿರುಮಲಗಿರಿ ದೇವಸ್ಥಾನ, ಸಂಜಯನಗರದ ರಾಧಾಕೃಷ್ಣ ಮಂದಿರ ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.
ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಶ್ರೀನಿವಾಸ ದೇವಸ್ಥಾನ, ಶ್ರೀನಿವಾಸನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಎಂ.ಜಿ.ರೈಲ್ವೆ ಕಾಲೊನಿಯ ವಿನಾಯಕ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಕೆಂಗೇರಿಯ ಬೆಟ್ಟನಪಾಳ್ಯದ ಸ್ತಂಭದ ಲಕ್ಷ್ಮೀರಂಗನಾಥಸ್ವಾಮಿ, ಕಗ್ಗಲೀಪುರದ ವೀರಾಂಜನೇಯಸ್ವಾಮಿ ದೇವಸ್ಥಾನ, ಯಲಚೇನಹಳ್ಳಿಯ ವೆಂಕಟರಮಣಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಏಕಾದಶಿ ಆಚರಣೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಾಗಡಿ ರಸ್ತೆಯ ಎಂ.ಜಿ. ರೈಲ್ವೆ ಕಾಲೊನಿಯ ವಿನಾಯಕ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾದವು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಜನೆ, ವಿಷ್ಣು ಸಹ್ರನಾಮ ಪಾರಾಯಣ, ಸಂಗೀತ ಕಛೇರಿ ಹಾಗೂ ಭರತನಾಟ್ಯ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಪಾಂಡುರಂಗ ವಿಷ್ಣುಸಹಸ್ರನಾಮ ಮಂಡಳಿಯಿಂದ ಮಲ್ಲೇಶ್ವರ ಆಟದ ಮೈದಾನದ ಎದುರು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬೆಣ್ಣೆ ಗೋವಿಂದಪ್ಪ ರಸ್ತೆಯಲ್ಲಿರುವ ಶ್ರೀವ್ಯಾಸರಾಜ ಮಠದಲ್ಲಿ (ಸೋಸಲೆ) ಅಖಂಡ ಭಾಗವತ ಪ್ರವಚನ ಸಮಾರಂಭ ಆಯೋಜಿಸಲಾಗಿತ್ತು. ಮರಿಯಪ್ಪನಪಾಳ್ಯದ ಮಾತಾ ಅಮೃತಾನಂದಮಯಿ ಗೋಪುರದ ಬಳಿ ವಿಘ್ನೇಶ್ವರ ಕಲಾ ಸಂಘವು ಹಮ್ಮಿಕೊಂಡಿದ್ದ ‘ಶ್ರೀನಿವಾಸ ಕಲ್ಯಾಣ’ ನಾಟಕವು ನೆರೆದಿದ್ದವರನ್ನು ರಂಜಿಸಿತು.
1.5 ಲಕ್ಷ ಭಕ್ತರು ಭೇಟಿ
ಮಹಾಲಕ್ಷ್ಮಿ ಲೇಔಟ್‌ನ ಹರೇ ಕೃಷ್ಣ ಗಿರಿಯಲ್ಲಿ ಇರುವ ಇಸ್ಕಾನ್ ಹಾಗೂ ವಸಂತಪುರದಲ್ಲಿ ಇರುವ ವೈಕುಂಠ ಗಿರಿಯಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ಆಚರಿಸಲಾಯಿತು. ದೇವಾಲಯದಲ್ಲಿ ಮುಂಜಾನೆ 3 ಗಂಟೆಗೆ ಶ್ರೀನಿವಾಸ ಗೋವಿಂದನಿಗೆ ಸುಪ್ರಭಾತ ಸೇವೆಯೊಂದಿಗೆ ಉತ್ಸವ ಪ್ರಾರಂಭವಾಯಿತು. ನಂತರ ವೇದ ಮಂತ್ರ ಪಠಣದೊಂದಿಗೆ ಪಂಚಾಮೃತ ಅಭಿಷೇಕ ನಡೆಯಿತು. ಉತ್ಸವ ಮೂರ್ತಿಗಳ ಮೆರವಣಿಗೆ ಶ್ರೀಕೃಷ್ಣ ರುಕ್ಮಿಣಿ ಮತ್ತು ಸತ್ಯಭಾಮೆ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಆಚರಣೆಗಳು ನಡೆದವು. ಈ ಎರಡೂ ದೇವಾಲಯಗಳಿಗೆ ತಲಾ 1.5 ಲಕ್ಷ ಭಕ್ತರು ಭೇಟಿ ನೀಡಿದ್ದರು. ಭಕ್ತಾಧಿಗಳಿಗೆ ಲಡ್ಡು ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.