ಬೆಂಗಳೂರು: ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಶುಕ್ರವಾರ ಮುಂಜಾನೆ 3.30ರಿಂದಲೇ ವಿಶೇಷ ಪೂಜೆ, ಧಾರ್ಮಿಕ ವಿಧಿಗಳು ನಡೆದವು.
ಹಲವು ದೇವಸ್ಥಾನಗಳಲ್ಲಿ ವೈಕುಂಠದ ದ್ವಾರಗಳನ್ನು ನಿರ್ಮಿಸಿ, ಭಕ್ತರ ದರ್ಶನಕ್ಕೆ ಅನುವು ಕಲ್ಪಿಸಲಾಗಿತ್ತು. ಮುಂಜಾನೆಯ ಚಳಿಯಲ್ಲಿಯೂ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು.
ನಗರದಲ್ಲಿರುವ ಕೃಷ್ಣ ಹಾಗೂ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಅತ್ಯಂತ ವಿಶೇಷ ಸಂಭ್ರಮ, ಸಡಗರವಿತ್ತು. ಹಲವು ರೀತಿಯ ಪುಷ್ಪಗಳಿಂದ ಅಲಂಕಾರ ಹಾಗೂ ವಿಶೇಷ ಪೂಜೆ ನಡೆಸಲಾಯಿತು.
ಇಸ್ಕಾನ್ ದೇವಾಲಯದಲ್ಲಿ ಮುಂಜಾನೆ 3.45ರಿಂದ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ನ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ದೇವಾಲಯ, ಆರ್.ಟಿ.ನಗರದ ಮಠದ ಹಳ್ಳಿಯ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಜಾಜಿನಗರದ 'ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ'ದಲ್ಲಿ ಭಕ್ತಾದಿಗಳು ದೇವರ ದರ್ಶನಕ್ಕೆ ಕೆಲವು ಗಂಟೆ ಸಾಲುಗಟ್ಟಿ ನಿಂತಿದ್ದರು.
ಕೆಲವು ದೇವಸ್ಥಾನಗಳಲ್ಲಿ ರಾಜಕಾರಣಿಗಳು ಹಾಗೂ ಸ್ಥಳೀಯ ಮುಖಂಡರ ಆಗಮನದಿಂದ ಸಾಮಾನ್ಯ ಭಕ್ತರು ದರ್ಶನಕ್ಕಾಗಿ ಕಾಯುವ ಪರಿಸ್ಥಿತಿ ಉಂಟಾಗಿತ್ತು. ವಿವಿಧ ದೇವಸ್ಥಾನಗಳಲ್ಲಿ ನಿರ್ಮಿಸಲಾಗಿದ್ದ ವೈಕುಂಠದ ದ್ವಾರ ಹಾದುಸಾಗುವ ಸಂಭ್ರಮದಲ್ಲಿ ‘ಗೋವಿಂದಾ, ಗೋವಿಂದಾ’ ಎಂದು ಸ್ಮರಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.