ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಶುಕ್ರವಾರ ಪ್ರೀಮಿಗಳು ಕೈ ಕೈ ಹಿಡಿದು ಹೋಗುತಿದ್ದ ದೃಶ್ಯ -– ಪ್ರಜಾವಾಣಿ ಚಿತ್ರ
ಬೆಂಗಳೂರು: ಪ್ರೇಮಿಗಳು ಶುಕ್ರವಾರ ಗುಲಾಬಿ ಹೂವುಗಳನ್ನು ನೀಡಿ ಪ್ರೇಮ ನಿವೇದನೆ ಮಾಡಿ ಹೃದಯದ ಪಿಸು ಮಾತುಗಳನ್ನು ಹಂಚಿಕೊಂಡರು. ಬೆಚ್ಚನೆಯ ಅಪ್ಪುಗೆಯಲ್ಲಿ ಮೈಮರೆತರು. ಕಣ್ಣಲ್ಲೇ ಕಾಡುವ, ಹೃದಯ ವೀಣೆಯನ್ನು ಮೀಟುವ ಕ್ಷಣಗಳಿಗೆ ಪ್ರೇಮಿಗಳ ದಿನ ಸಾಕ್ಷಿಯಾಯಿತು.
ಕಬ್ಬನ್ ಉದ್ಯಾನ, ಲಾಲ್‌ಬಾಗ್, ಹಲಸೂರು ಕೆರೆ, ಸ್ಯಾಂಕಿ ಕೆರೆ, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲದ ಕಾಫಿ ಡೇ ಹಾಗೂ ಪಬ್‌ಗಳಲ್ಲಿ ಯುವಜೋಡಿಗಳು ಭಾರಿ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಸಂಗಾತಿಗಳಿಗೆ ಉಡುಗೊರೆ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡರು.
ವಿವಿಧ ಉದ್ಯಾನಗಳು, ರಸ್ತೆಗಳಲ್ಲಿ ಕೈ ಹಿಡಿದು ನಡೆಯುವ ಜೋಡಿಗಳು, ಅಲ್ಲಲ್ಲಿ ಆತುಕೊಂಡು ಕುಳಿತುಕೊಂಡ ಜೋಡಿಗಳು, ಅಪ್ಪುಗೆಯಲ್ಲಿ ಮೈಮರೆತ ಜೋಡಿಗಳು ಕಂಡರು.
ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ಒಂದು ಗುಲಾಬಿ ಹೂವಿಗೆ ₹10, ಕೆಲವು ಸಂದರ್ಭಗಳಲ್ಲಿ ಎರಡು ಗುಲಾಬಿ ಹೂಗಳು ₹10ಕ್ಕೆ ಮಾರಾಟವಾಗು ತ್ತಿದ್ದವು. ಪ್ರೇಮಿಗಳ ದಿನದ ಅಂಗವಾಗಿ ಒಂದು ಗುಲಾಬಿಯ ದರ ₹30ಕ್ಕೆ ಏರಿತ್ತು.
ಕತ್ತೆಗಳಿಗೆ ಮದುವೆ: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕತ್ತೆಗಳಿಗೆ ಮದುವೆ ಮಾಡುವ ಮೂಲಕ ಪ್ರೇಮಿಗಳ ದಿನವನ್ನು ವಿಶಿಷ್ಠವಾಗಿ ಆಚರಿಸಲಾಯಿತು.
ಕತ್ತೆಗಳನ್ನು ಮದುಮಕ್ಕಳಂತೆ
ಸಿಂಗರಿಸಲಾಗಿತ್ತು. ಕತ್ತೆಯ ಕುತ್ತಿಗೆಗೆ ತಾಳಿ ಕಟ್ಟಿ ಮಂಗಳವಾದ್ಯ ನುಡಿಸಲಾಯಿತು. ಅಕ್ಷತೆ ಕಾಳು ಹಾಕಿ ಹರಸಲಾಯಿತು.
ಪ್ರೇಮಿಗಳ ದಿನ ಯಾರೂ ಪ್ರೇಮಿಗಳಿಗೆ ತೊಂದರೆ ಕೊಡದಂತೆ ಸರ್ಕಾರ ರಕ್ಷಣೆ ನೀಡಬೇಕು. ಫೆಬ್ರುವರಿ 14ರಂದು ರಜೆ ಘೋಷಣೆ ಮಾಡಬೇಕು. ಮದುವೆಯಾಗುವ ಪ್ರೇಮಿಗಳಿಗೆ ₹2 ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ವಾಟಾಳ್ ನಾಗರಾಜ್
ಆಗ್ರಹಿಸಿದರು.
‘88 ಲಕ್ಷ ಗುಲಾಬಿಗಳ ಮಾರಾಟ, ₹11 ಕೋಟಿ ಸಂಗ್ರಹ’
‘ಪ್ರೇಮಿಗಳ ದಿನ ಆಚರಣೆ ಪ್ರಯುಕ್ತ ಈ ವರ್ಷ ಗುಲಾಬಿ ಹೂವಿಗೆ ಹಚ್ಚಿನ ಬೇಡಿಕೆಯಿತ್ತು. ಬೆಂಗಳೂರು ಅಂತರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಎಫ್‌ಎಬಿ) ಫೆಬ್ರುವರಿ 1ರಿಂದ 14ರವರೆಗೆ ಒಟ್ಟು 88ಲಕ್ಷ ಗುಲಾಬಿ ಹೂಗಳ ಮಾರಾಟವಾಗಿದ್ದು, ಒಟ್ಟು ₹11 ಕೋಟಿ ವಹಿವಾಟು ನಡೆದಿದೆ’ ಎಂದು ಐಎಫ್‌ಎಬಿ ವ್ಯವಸ್ಥಾಪಕ ನಿರ್ದೇಶಕ ಎಂ. ವಿಶ್ವನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.