ADVERTISEMENT

ಪ್ರೇಮಿಗಳ ದಿನ: ಬಣ್ಣಗಟ್ಟಿದ ಗುಲಾಬಿ ಮಾರುಕಟ್ಟೆ

ಐಎಫ್‌ಎಬಿಯಿಂದ 50 ಲಕ್ಷ ಗುಲಾಬಿಗಳನ್ನು ಪೂರೈಸುವ ನಿರೀಕ್ಷೆ, ಏರಿದ ಗುಲಾಬಿ ದರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 18:24 IST
Last Updated 7 ಫೆಬ್ರುವರಿ 2024, 18:24 IST
ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಎಫ್‌ಎಬಿ) ಬುಧವಾರ ಹರಾಜಿಗೆ ಬಂದಿದ್ದ ಕೆಂಗುಲಾಬಿಯನ್ನು ಜೋಡಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ರಂಜು ಪಿ
ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಎಫ್‌ಎಬಿ) ಬುಧವಾರ ಹರಾಜಿಗೆ ಬಂದಿದ್ದ ಕೆಂಗುಲಾಬಿಯನ್ನು ಜೋಡಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ರಂಜು ಪಿ   

ಬೆಂಗಳೂರು: ಪ್ರೇಮಿಗಳ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಂಗುಲಾಬಿಗೆ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಿಂದ (ಐಎಫ್‌ಎಬಿ) ಹೊರ ರಾಜ್ಯ ಹಾಗೂ ದೇಶಗಳಿಗೆ ಪೂರೈಕೆಯಾಗುತ್ತಿರುವ ಗುಲಾಬಿ ಪ್ರಮಾಣ ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿದೆ.

ಹೆಬ್ಬಾಳದ ಐಎಫ್‌ಎಬಿ ಕೇಂದ್ರಕ್ಕೆ ಬಣ್ಣ ಬಣ್ಣದ ಗುಲಾಬಿಗಳು ಅಧಿಕ ಪ್ರಮಾಣದಲ್ಲಿ ಬರುತ್ತಿವೆ. ಅಷ್ಟೇ ಪ್ರಮಾಣದಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೋಲ್ಕತ್ತ, ಒಡಿಶಾ, ಗುವಾಹಟಿ, ಚಂಡೀಗಢ, ಗುಜರಾತ್, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಸೇರಿದಂತೆ ದೇಶದ ಪ್ರಮುಖ ನಗರಗಳು ಹಾಗೂ ಮಲೇಷ್ಯಾ, ಅರಬ್‌ ರಾಷ್ಟ್ರಗಳು, ಸಿಂಗಪುರ ಹಾಗೂ ನ್ಯೂಜಿಲ್ಯಾಂಡ್‌  ರಾಷ್ಟ್ರಗಳಿಗೆ ಪ್ರತಿನಿತ್ಯ ಲಕ್ಷಾಂತರ ಗುಲಾಬಿಗಳು ಈ ಕೇಂದ್ರದಿಂದ ರಫ್ತಾಗುತ್ತಿವೆ.

ಫೆಬ್ರುವರಿ ತಿಂಗಳಲ್ಲಿ ಈ ಕೇಂದ್ರಕ್ಕೆ ಪ್ರತಿನಿತ್ಯ ಬರುವ ಗುಲಾಬಿಗಳ ಪ್ರಮಾಣ ಹೆಚ್ಚಾಗುತ್ತದೆ. ಅದರಲ್ಲೂ ಫೆ. 14ರ ಪ್ರೇಮಿಗಳ ದಿನಕ್ಕೆ ಮುಂಚಿನ ಕೆಲವು ದಿನಗಳಲ್ಲಿ ಇಲ್ಲಿಂದ ಪೂರೈಕೆಯಾಗುವ ಗುಲಾಬಿ ಹೂಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಡಿಕೆ ಹೆಚ್ಚಾಗಿದ್ದು, ದರವೂ ಏರಿಕೆಯಾಗಿದೆ. ಸದ್ಯ ಇಲ್ಲಿ ರಂಗು ರಂಗಿನ ಗುಲಾಬಿಗಳ ವಹಿವಾಟು ಜೋರಾಗಿದೆ.

ADVERTISEMENT

‘ಸಾಮಾನ್ಯ ದಿನಗಳಲ್ಲಿ ಈ ಕೇಂದ್ರಕ್ಕೆ ಪ್ರತಿನಿತ್ಯ 5 ಲಕ್ಷ ಗುಲಾಬಿಗಳು ಪೂರೈಕೆಯಾಗುತ್ತವೆ. ಹೋದವರ್ಷ ಪ್ರೇಮಿಗಳ ದಿನದ ಸಂದರ್ಭದಲ್ಲಿ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಗುಲಾಬಿಗಳು ಪೂರೈಕೆಯಾಗಿದ್ದವು. ಈ ವರ್ಷ ಪ್ರತಿನಿತ್ಯ 9 ಲಕ್ಷದಿಂದ 10 ಲಕ್ಷ ಗುಲಾಬಿಗಳು ಪೂರೈಕೆಯಾಗುವ ಸಾಧ್ಯತೆ ಇದ್ದು, ಒಟ್ಟು 50 ಲಕ್ಷ ಗುಲಾಬಿಗಳು ಪೂರೈಕೆಯಾಗುವ ನಿರೀಕ್ಷೆ ಇದೆ’ ಎಂದು ಐಎಫ್‌ಎಬಿ ಸಹಾಯಕ ಮುಖ್ಯ ವ್ಯವಸ್ಥಾಪಕಿ ವೀಣಾ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

‘ಐಎಫ್‌ಎಬಿ ಎಂದರೆ ಗುಲಾಬಿಗಳಷ್ಟೇ ಮಾರಾಟವಾಗುತ್ತದೆ ಎಂಬ ಭಾವನೆ ಇದೆ. ಈ ಬಾರಿಯ ಪ್ರೇಮಿಗಳ ದಿನಕ್ಕೆ ಗುಲಾಬಿಯ ಜೊತೆಗೆ ಬರ್ಡ್‌ ಆಫ್‌ ಪ್ಯಾರಡೈಸ್, ಆರ್ಕಿಡ್ಸ್‌, ಕಾರ್ನಿಷನ್‌ ಹೂವುಗಳನ್ನು ಪೂರೈಕೆ ಮಾಡುವ ಉದ್ದೇಶವಿದೆ. ಮಧ್ಯಮ ವರ್ಗದ ಜನ ಕಡಿಮೆ ಬೆಲೆಗೆ ಸಿಗುವ ಪ್ಲಾಸ್ಟಿಕ್‌ ಹೂಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆದ್ದರಿಂದ, ನೈಸರ್ಗಿಕ ಹೂಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಪ್ರೇಮಿಗಳ ದಿನದ ಸಮಯದಲ್ಲಿ ಒಂದು ಕೆಂಗುಲಾಬಿಯ (ತಾಜಮಹಲ್‌) ದರ ಗರಿಷ್ಠ ₹15ರಂತೆ ಹರಾಜಿನಲ್ಲಿ ಮಾರಾಟವಾಗಲಿದೆ. ಹೋದವರ್ಷ ನ್ಯೂ ಆರ್ಲಿಯನ್ಸ್‌ ಗುಲಾಬಿಯು (ನೇರಳೆ ಬಣ್ಣದ್ದು) ಒಂದಕ್ಕೆ ಗರಿಷ್ಠ ದರ ₹40ರಂತೆ ಹರಾಜಿನಲ್ಲಿ ಮಾರಾಟವಾಗಿತ್ತು’ ಎಂದು ಅವರು ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಎಫ್‌ಎಬಿ) ಬುಧವಾರ ಹರಾಜಿಗೆ ಬಂದಿದ್ದ ಕೆಂಗುಲಾಬಿಯನ್ನು ಸಿಬ್ಬಂದಿಯೊಬ್ಬರು ಜೋಡಿಸಿದರು –ಪ್ರಜಾವಾಣಿ ಚಿತ್ರ/ರಂಜು ಪಿ
ವೀಣಾ
ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಎಫ್‌ಎಬಿ) ಬುಧವಾರ ಹರಾಜಿಗೆ ಬಂದಿದ್ದ ಕೆಂಗುಲಾಬಿಯನ್ನು ಜೋಡಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ರಂಜು ಪಿ

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಗುಲಾಬಿಗಳು ಉತ್ತಮ ಗುಣಮಟ್ಟದಿಂದ ಕೊಡಿರುತ್ತವೆ. ಆದ್ದರಿಂದ ಇವುಗಳಿಗೆ ದೇಶ–ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ವೀಣಾ ಐಎಫ್‌ಎಬಿ ಸಹಾಯಕ ಮುಖ್ಯ ವ್ಯವಸ್ಥಾಪಕಿ

ವಾರದವರೆಗೆ ತಾಜಾತನ

ವಿಶೇಷ ಗುಣವುಳ್ಳ ಈ ಗುಲಾಬಿಗಳನ್ನು ಕಟಾವು ಆದ ಬಳಿಕ ಗರಿಷ್ಠ 7 ದಿನಗಳವರೆಗೆ ಇಡಬಹುದು. ಕಾಂಡದ ಸಹಿತ ನೀರಿನಲ್ಲೇ ಇಡುವುದರಿಂದ ಒಂದು ವಾರದವರೆಗೆ ತಾಜಾತನದಿಂದ ಕೂಡಿರುತ್ತದೆ. ಹರಾಜು ಪ್ರಕ್ರಿಯೆ ನಂತರ ಬೇರೆ ಸ್ಥಳಗಳಿಗೆ ಹೂವು ಪೂರೈಕೆಯಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಗುಲಾಬಿಗಳನ್ನು ತಾಜಾ ಸ್ಥಿತಿಯಲ್ಲಿಡುವ ಶೀತಲೀಕರಣ ವ್ಯವಸ್ಥೆ ಕೇಂದ್ರದಲ್ಲಿದೆ.

ನೋಂದಣಿಯಾದವರಿಗೆ ಮಾತ್ರ ಅವಕಾಶ

‘ಐಎಫ್‌ಎಬಿ ಕೇಂದ್ರದಲ್ಲಿ ನೋಂದಣಿಯಾದ ರೈತರು ಹಾಗೂ ಖರೀದಿದಾರರಿಗೆ ವಹಿವಾಟು ನಡೆಸಲು ಅವಕಾಶವಿದೆ. ಈ ಕೇಂದ್ರದಲ್ಲಿ 235 ರೈತರು ಹಾಗೂ 200ಕ್ಕೂ ಹೆಚ್ಚು ಖರೀದಿದಾರು ನೋಂದಣಿ ಮಾಡಿಕೊಂಡಿದ್ದಾರೆ. 80ರಿಂದ 90 ಜನ ರೈತರು ಹಾಗೂ 30ರಿಂದ 40 ಜನ ಖರೀದಿದಾರರು ಪ್ರತಿನಿತ್ಯ ನಡೆಯುವ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ವೀಣಾ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.