ADVERTISEMENT

‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಲಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:23 IST
Last Updated 20 ಜನವರಿ 2021, 18:23 IST

ದಾಬಸ್ ಪೇಟೆ: ‘ರಾಜ್ಯದಲ್ಲಿ 55 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಾಲ್ಮಿಕಿ ಸಮುದಾಯದ ಜನ ಇದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಇವರು ಇವತ್ತಿಗೂ ಹಿಂದುಳಿದ್ದು, ಅವರ ಸಬಲೀಕರಣಕ್ಕಾಗಿ ಮೀಸಲಾತಿ ಹೆಚ್ಚಿಸಬೇಕಿದೆ’ ಎಂದು ರಾಚನಹಳ್ಳಿಯ ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.

ಸೋಂಪುರ ಹೋಬಳಿಯ ಆಗಲಕುಪ್ಪೆ ಗ್ರಾಮದಲ್ಲಿ ನಡೆದ ವಾಲ್ಮೀಕಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಸಮುದಾಯದವರ ಮೀಸಲಾತಿಗಾಗಿ ಪಾದಯಾತ್ರೆ ಮೂಲಕ ಹೋರಾಟ ನಡೆಸಲಾಯಿತು. ಆಗ ಮುಖ್ಯಮಂತ್ರಿಗಳಾಗಿದ್ದವರು, ಆಯೋಗವೊಂದನ್ನು ರಚಿಸಿ ಅದರ ವರದಿ ಬಂದ ನಂತರ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ಆ ಕಾರ್ಯ ಆಗಿಲ್ಲ’ ಎಂದರು.

‘ವಾಲ್ಮೀಕಿ ಜನಾಂಗಕ್ಕೆ ಹೆಚ್ಚಿನ ಮೀಸಲಾತಿ ನೀಡುವ ಬಗ್ಗೆ ಮೋಹನ್ ದಾಸ್ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೆ ತರಬೇಕು’ ಎಂದ ಅವರು, ‘ನಮ್ಮ ಸಮುದಾಯದವರು ಫೆಬ್ರವರಿ 8 ಮತ್ತು 9ರಂದು ರಾಚನಹಳ್ಳಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕು’ ಎಂದರು.

ADVERTISEMENT

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಗೋವಿಂದರಾಜು, ಜಯಮ್ಮ, ಜಯಲಕ್ಷ್ಮೀ ರಾಜಣ್ಣ, ಜನಾಂಗದ ಮುಖಂಡ ಬಸವನಹಳ್ಳಿ ನರಸಿಂಹಮೂರ್ತಿ, ತಿಮ್ಮರಾಜ್, ದೇವರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.