ADVERTISEMENT

ತರಕಾರಿ ದರ ಏರಿಳಿತ: ಹಣ್ಣಿನ ದರಗಳು ಯಥಾಸ್ಥಿತಿ

ಸೊಪ್ಪುಗಳು ಅಗ್ಗ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:02 IST
Last Updated 4 ಫೆಬ್ರುವರಿ 2022, 19:02 IST
ಕೆ.ಆರ್.ಮಾರುಕಟ್ಟೆ (ಸಾಂದರ್ಭಿಕ ಚಿತ್ರ)
ಕೆ.ಆರ್.ಮಾರುಕಟ್ಟೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕಳೆದ ವಾರದಿಂದ ತರಕಾರಿ ದರಗಳಲ್ಲಿ ಏರಿಳಿತ ಕಂಡುಬಂದಿದ್ದು, ಕ್ಯಾರೆಟ್‌, ಎಲೆಕೋಸು, ಸೋರೆಕಾಯಿ,ಕುಂಬಳಕಾಯಿ ಸೇರಿದಂತೆ ಕೆಲವು ತರಕಾರಿಗಳ ದರ ಹೆಚ್ಚಾಗಿದೆ.

ಕಳೆದ ವರ್ಷದಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ ಬಹುತೇಕ ಎಲ್ಲ ತರಕಾರಿಗಳ ದರ ಹೆಚ್ಚಾಗಿ ₹100 ಗಡಿ ದಾಟಿದ್ದವು. ಆದರೆ, ಜನವರಿ ಕೊನೆಯ ವಾರದಲ್ಲಿದರಗಳು ಕ್ರಮೇಣವಾಗಿ ತಗ್ಗಿದ್ದವು.

ಈಗ ಕೆಲವು ತರಕಾರಿಗಳು ದುಬಾರಿಯಾಗಿವೆ. ಕ್ಯಾರೆಟ್‌, ಹಸಿ ಮೆಣಸಿನಕಾಯಿ ದರ ಮತ್ತೆ ಗಣನೀಯವಾಗಿ ಏರುತ್ತಿದ್ದು, ಕೆ.ಜಿ.ಗೆ ತಲಾ ₹80ರಂತೆ ಮಾರಾಟ ಆಗುತ್ತಿವೆ.

ADVERTISEMENT

‘ಮಳೆಯ ಹೊಡೆತದಿಂದ ಬೆಳೆಗಳೆಲ್ಲ ಹಾಳಾಗಿದ್ದರಿಂದ ಹೊಸ ಬೆಳೆಗಳಫಸಲು ಮಾರುಕಟ್ಟೆಗೆ ಬರಲು ಸಾಕಷ್ಟು ಸಮಯ ಬೇಕಾಯಿತು. ಹಾಗಾಗಿ, ಬೆಲೆ ಏರಿಕೆ ಬಿಸಿ ತಟ್ಟಿತ್ತು. ಎರಡು ವಾರಗಳಿಂದ ಹಲವಾರು ತರಕಾರಿಗಳ ದರ ತಗ್ಗಿದೆ. ಇದೇ ವೇಳೆ ಒಂದೆರಡು ಉತ್ಪನ್ನಗಳ ಬೆಲೆಯೂ ಏರಿದೆ’ ಎಂದು ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ ವೆಂಕಟೇಶ್ ಹೇಳಿದರು.

‘ಟೊಮೊಟೊ, ಬದನೆ, ಬೆಂಡೆಕಾಯಿ, ಆಲೂಗಡ್ಡೆ, ಈರುಳ್ಳಿ, ಹಾಗಲಕಾಯಿ ದರಗಳು ಜನವರಿಯಲ್ಲಿ ಭಾರಿ ಏರಿಕೆ ಕಂಡಿದ್ದವು. ಇವು ಈಗ ಸಾಮಾನ್ಯ ದರಕ್ಕೆ ಬಂದು ನಿಂತಿವೆ. ಟೊಮೆಟೊ ಕೆ.ಜಿ.ಗೆ ₹10ರಿಂದ ₹20ರವರೆಗೆ ಮಾರಾಟವಾಗುತ್ತಿದೆ. ₹15ರಂತೆ ಮಾರಾಟವಾಗುತ್ತಿದ್ದ ಸೋರೆಕಾಯಿ ₹50ರವರೆಗೆ ಏರಿದೆ’ ಎಂದು ವಿವರಿಸಿದರು.

‘ಮಳೆಗಾಲದಲ್ಲಿ ಕೆಲವು ತರಕಾರಿಗಳು ಹಾನಿಯಾದರೆ, ಚಳಿಗಾಲದ ವಾತಾವರಣಕ್ಕೆ ಕೆಲವು ತರಕಾರಿ ಬೆಳೆಗಳು ಕುಂಠಿತವಾಗುತ್ತವೆ. ಈ ಕಾರಣದಿಂದಲೇ ದರಗಳು ಹೆಚ್ಚಾಗಿವೆ. ಉಳಿದ ಉತ್ಪನ್ನಗಳ ದರ ಸದ್ಯಕ್ಕೆ ಇದೇ ಸ್ಥಿತಿಯಲ್ಲಿರಲಿದೆ. ಶಿವರಾತ್ರಿ ಸಮಯಕ್ಕೆ ದರಗಳು ಏರಿಕೆಯಾಗಲಿವೆ’ ಎಂದು ಹೇಳಿದರು.

ತಗ್ಗಿದ ಸೊಪ್ಪಿನ ದರ: ಸೊಪ್ಪಿನ ದರಗಳೆಲ್ಲ ಕಳೆದ ತಿಂಗಳು ಹೆಚ್ಚಾಗಿದ್ದವು. ಈಗ ಎಲ್ಲ ಸೊಪ್ಪಿನ ದರ ದಿಢೀರ್ ಕುಸಿದಿದ್ದು, ಪ‍್ರತಿ ಕಟ್ಟಿಗೆ ₹8ರಿಂದ ₹10ರವರೆಗೆ ಮಾರಾಟ ಆಗುತ್ತಿವೆ. ಹಣ್ಣಿನ ದರಗಳೆಲ್ಲ ಯಥಾಸ್ಥಿತಿಯಲ್ಲಿವೆ.

ಕುಂಬಳಕ್ಕೆ ಬೇಡಿಕೆ:‘ಸಾಂಬಾರು ತಯಾರಿಗೆ ಕುಂಬಳಕಾಯಿ ಪ್ರಧಾನವಾಗಿ ಬಳಸುತ್ತಾರೆ.ಮೊದಲೆಲ್ಲ ಕುಂಬಳಕಾಯಿ ಹೇರಳವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು.ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿತ್ತು. ಆದರೆ, ಒಂದು ತಿಂಗಳಿನಿಂದ ಕುಂಬಳಕಾಯಿ ಆವಕ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೇಡಿಕೆಯೂ ಹೆಚ್ಚಾಗಿದೆ’ಎಂದು ಯಲಹಂಕದ ತರಕಾರಿ ಚಿಲ್ಲರೆ ವ್ಯಾಪಾರಿ ಸಂತೋಷ್‌ ಕುಮಾರ್ ಮಾಹಿತಿ ನೀಡಿದರು.

‘ಮೊದಲು ಕುಂಬಳಕಾಯಿ ಹೆಚ್ಚೆಂದರೆ ಕೆ.ಜಿ.ಗೆ ₹10ರಿಂದ ₹15ರಂತೆ ಮಾರಾಟ ಮಾಡುತ್ತಿದ್ದೆವು. ಈಗ ಕೆ.ಜಿ.ಗೆ ₹40ರಿಂದ ₹50ರವರೆಗೆ ದರ ಏರಿದೆ.ಸಗಟು ಮಾರುಕಟ್ಟೆಯಲ್ಲೂ ಉತ್ತಮವಾದ ಕುಂಬಳ ಸಿಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.