ADVERTISEMENT

ತರಕಾರಿ ದರ ಹೆಚ್ಚಳ: ಕೊತ್ತಂಬರಿ ಕಟ್ಟಿಗೆ ₹60

ಸತತ ಮಳೆಯಿಂದಾಗಿ ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆ, ದರದಲ್ಲಿ ಏರಿಳಿತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 20:49 IST
Last Updated 14 ಸೆಪ್ಟೆಂಬರ್ 2022, 20:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚಿಗೆ ಸುರಿದ ಸತತ ಮಳೆಗೆ ಸೊಪ್ಪು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ಅದರ ಪರಿಣಾಮ ಗ್ರಾಹಕರನ್ನು ಬಾಧಿಸತೊಡಗಿದೆ. ಕೊತ್ತಂಬರಿ ಕಟ್ಟಿಗೆ ₹60ರಂತೆ ಮಾರಾಟವಾಗುತ್ತಿದೆ. ಕೆಲ ತರಕಾರಿ ದರಗಳಲ್ಲಿ ಏರಳಿತವಾಗಿದೆ.

ಕೆಲ ದಿನಗಳ ಹಿಂದೆ ಕೊತ್ತಂಬರಿ ಪ್ರತಿ ಕಟ್ಟಿಗೆ ₹20ರಂತೆ ಮಾರಾಟವಾಗುತ್ತಿತ್ತು. ಮಾರುಕಟ್ಟೆಗೆ ಉತ್ಪನ್ನಗಳ ಆವಕದಲ್ಲಿ ವ್ಯತ್ಯಾಸ ಆಗಿರುವುದು ದಿಢೀರನೇ ಬೆಲೆ ಏರಿಕೆಗೆ ಕಾರಣ ಎಂದು ಎಪಿಎಂಸಿ ವರ್ತಕರು ಮತ್ತು ಕೆ. ಆರ್. ಮಾರ್ಕೆಟ್‌ ಸೊಪ್ಪುಗಳ ವ್ಯಾಪಾರಿ ಸೊಪ್ಪುಕುಮಾರ್ ತಿಳಿಸಿದರು.

ಸೊಪ್ಪು ತುಟ್ಟಿ: ’ಮಳೆಯ ಕಾರಣಕ್ಕೆ ಸೊಪ್ಪಿನ ಬೆಲೆ ಏರಿಕೆಯಾಗಿದೆ. ಅದರಲ್ಲೂ ನಾಟಿ ಕೊತ್ತಂಬರಿ ಆವಕ ಕಡಿಮೆಯಾಗಿದೆ. ದಪ್ಪನೆಯ ಕಟ್ಟು ₹50–60ವರೆಗೂ ಮಾರಾಟವಾಗುತ್ತಿದೆ. ಸಬ್ಬಸ್ಸಿಗೆ ಪ್ರತಿ ಕಟ್ಟಿಗೆ ₹40ರಂತೆ ಮಾರಾಟವಾಗುತ್ತಿದೆ. ಮೆಂತೆ, ಪಾಲಾಕ್ ದರದಲ್ಲೂ ಏರಿಕೆ ಆಗಿದ್ದು, ಇನ್ನೂ ಕೆಲವು ದಿನ ಈ ಪರಿಸ್ಥಿತಿ ಮುಂದುವರಿಯಲಿದೆ’ ಎಂದರು.

ADVERTISEMENT

ಬೀಟ್‌ರೂಟ್‌, ಮೆಣಸಿನಕಾಯಿ, ಅವರೆಕಾಯಿ ದರಗಳೂ ಕೆ.ಜಿ.ಗೆ ₹50ಕ್ಕಿಂತ ಹೆಚ್ಚಳ ಕಂಡಿವೆ. ಈ ತರಕಾರಿಗಳ ದರ ಕಳೆದ ವಾರ ಕಡಿಮೆ ಇತ್ತು. ಪ್ರತಿ ತರಕಾರಿ ದರ ಕೆ.ಜಿಗೆ ₹20ರಿಂದ ₹30 ಹೆಚ್ಚಳವಾಗಿದೆ.

‘ಪ್ರತಿ ಕೆ.ಜಿ. ಕ್ಯಾರೆಟ್‌ ₹80, ಪಡವಲಕಾಯಿ ₹80, ಬೀನ್ಸ್‌ ₹100 ಬಟಾಣಿ ₹120ರಂತೆ ಮಾರಾಟವಾಗುತ್ತಿದೆ. ಟೊಮೊಟೊ, ಬದನೆ, ಆಲೂಗೆಡ್ಡೆ, ಈರುಳ್ಳಿ, ಹಾಗಲಕಾಯಿ ದರಗಳು ಸ್ಥಿರವಾಗಿವೆ. ಟೊಮೆಟೊ ಕೆ.ಜಿ.ಗೆ ₹20ರಿಂದ ₹30ರವರೆಗೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ವೆಂಕಟೇಶ್‌ ಮತ್ತು ತಬ್ರೇಜ್‌.

‘ಮೊದಲಿನಂತೆ ಅಗತ್ಯ ಪ್ರಮಾಣದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆ ಯಾಗಲು ತಿಂಗಳುಗಟ್ಟಲೆ ಸಮಯ ಬೇಕು. ಅಲ್ಲಿಯವರೆಗೆ ದರ ಏರಿಕೆ ತಪ್ಪಿದ್ದಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.