ADVERTISEMENT

ಟೆಸ್ಟ್ ಡ್ರೈವ್‌ ಸೋಗಿನಲ್ಲಿ ನಕಲಿ ಕೀ ಮಾಡಿ ವಾಹನ ಕಳವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 19:29 IST
Last Updated 5 ಸೆಪ್ಟೆಂಬರ್ 2020, 19:29 IST
ಜಪ್ತಿ ಮಾಡಲಾದ ವಾಹನಗಳ ಜೊತೆ ಆರೋಪಿ ಭರತ್
ಜಪ್ತಿ ಮಾಡಲಾದ ವಾಹನಗಳ ಜೊತೆ ಆರೋಪಿ ಭರತ್   

ಬೆಂಗಳೂರು: ಟೆಸ್ಟ್ ಡ್ರೈವ್ ಸಲುವಾಗಿ ವಾಹನ ಪಡೆದು, ಅದರ ನಕಲಿ ಕೀ ಮಾಡಿಕೊಂಡು ನಂತರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಬಿ.ಎಂ. ಭರತ್ (24) ಎಂಬಾತನನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಚನ್ನಸಂದ್ರ ನಿವಾಸಿ ಬಿ.ಎಂ. ಭರತ್, ಮೆಕ್ಯಾನಿಕ್ ಆಗಿದ್ದ. ಆತನಿಂದ ಕಾರು ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಒಎಲ್‌ಎಕ್ಸ್ ಜಾಲತಾಣದಲ್ಲಿ ವಾಹನ ಮಾರಾಟಕ್ಕಿಟ್ಟವರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಟೆಸ್ಟ್ ಡ್ರೈವ್ ಸೋಗಿನಲ್ಲಿ ವಾಹನ ಪಡೆದು ಓಡಿಸುತ್ತಿದ್ದ. ನಕಲಿ ಕೀ ತಯಾರಿಸುವಲ್ಲಿ ಪರಿಣಿತನಾಗಿದ್ದ ಆತ, ಟೆಸ್ಟ್ ಡ್ರೈವ್‌ ವೇಳೆ ನಕಲಿ ಕೀ ಮಾಡಿಟ್ಟುಕೊಳ್ಳುತ್ತಿದ್ದ. ‘ಕೆಲ ದಿನ ಬಿಟ್ಟು ಖರೀದಿ ಬಗ್ಗೆ ಮಾತನಾಡೋಣ’ ಎಂದು ಹೇಳಿ ವಾಹನವನ್ನು ಮರಳಿಸುತ್ತಿದ್ದ. ಬಳಿಕ ನಕಲಿ ಕೀ ಬಳಸಿ ವಾಹನ ಕದಿಯುತ್ತಿದ್ದ. ಇತ್ತೀಚೆಗೆ ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ₹ 14.96 ಲಕ್ಷ ಮೌಲ್ಯದ ಕಾರು ಕದ್ದಿದ್ದ. ಆ ಬಗ್ಗೆ ದಾಖಲಾದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಸಂಜೀವ್ ಪಾಟೀಲ ಹೇಳಿದರು.

ADVERTISEMENT

5 ಲೀಟರ್ ಸ್ಯಾನಿಟೈಸರ್‌ ಖರೀದಿಸಿ ಕರೆ; ‘ಬೀದಿಬದಿಯಲ್ಲಿ ಸ್ಯಾನಿಟೈಸರ್‌ ಮಾರುತ್ತಿದ್ದ ವ್ಯಾಪಾರಿ ಬಳಿ ಹೋಗಿದ್ದ ಆರೋಪಿ, 5 ಲೀಟರ್ ಸ್ಯಾನಿಟೈಸರ್‌ ಖರೀದಿ ಮಾಡಿದ್ದ. ತನ್ನ ಮೊಬೈಲ್‌ನಲ್ಲಿ ಕರೆನ್ಸಿ ಇಲ್ಲವೆಂದು ಹೇಳಿ ವ್ಯಾಪಾರಿಯ ಮೊಬೈಲ್ ಪಡೆದು ಕಾರಿನ ಮಾಲೀಕರಿಗೆ ಕರೆ ಮಾಡಿದ್ದ. ಟೆಸ್ಟ್ ಡ್ರೈವ್‌ಗೆ ಕಾರು ತರುವಂತೆ ಹೇಳಿ ಕೃತ್ಯ ಎಸಗಿದ್ದ’ ಎಂದು ಸಂಜೀವ್ ಪಾಟೀಲ ತಿಳಿಸಿದರು.

‘ಆರಂಭದಲ್ಲಿ ಬೀದಿಬದಿ ವ್ಯಾಪಾರಿ ಮೇಲೆ ಅನುಮಾನವಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಭರತ್ ಸಿಕ್ಕಿಬಿದ್ದ. ಆತ, ಹಲವೆಡೆ ಕಾರು ಹಾಗೂ ಬೈಕ್ ಕದ್ದಿರುವ ಮಾಹಿತಿ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.