ADVERTISEMENT

ಪ್ರತಿ ಕ್ಷಣ ಆಸ್ವಾದಿಸಿ, ಪ್ರೀತಿ–ಸ್ನೇಹ, ವಿದ್ಯೆಗೆ ತಲೆಬಾಗಿ: ನಟ ರವಿಚಂದ್ರನ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 15:13 IST
Last Updated 4 ಏಪ್ರಿಲ್ 2025, 15:13 IST
ವೇಮನ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವೇಮನೋತ್ಸವ–25 ಸಾಂಸ್ಕೃತಿಕ ಹಬ್ಬದಲ್ಲಿ ನಟ ರವಿಚಂದ್ರನ್‌ ಭಾಗವಹಿಸಿದ್ದರು.
ವೇಮನ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವೇಮನೋತ್ಸವ–25 ಸಾಂಸ್ಕೃತಿಕ ಹಬ್ಬದಲ್ಲಿ ನಟ ರವಿಚಂದ್ರನ್‌ ಭಾಗವಹಿಸಿದ್ದರು.   

ಬೊಮ್ಮನಹಳ್ಳಿ: ‘ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಲೇ ಪ್ರೀತಿ, ಸ್ನೇಹ ಮತ್ತು ವಿದ್ಯೆಗೆ ನಾವು ತಲೆಬಾಗಬೇಕು. ಮಹಿಳೆಯರ ಬಗ್ಗೆ ಗೌರವದಿಂದಿರಬೇಕು. ಆಗ ಮಾತ್ರವೇ ನಾವು ಮನುಷ್ಯರಾಗಲು ಸಾಧ್ಯ’ ಎಂದು ನಟ ರವಿಚಂದ್ರನ್‌ ಹೇಳಿದರು.

ಶುಕ್ರವಾರ ಕೋರಮಂಗಲದ ವೇಮನ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರಕಾಲೇಜು ಸಾಂಸ್ಕೃತಿಕ ಹಬ್ಬ ‘ವೇಮನೋತ್ಸವ–25’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನರು ಮೊಬೈಲ್‌ ದಾಸರಾಗದೆ ಬದುಕು ರೂಪಿಸಿಕೊಳ್ಳುವುದರತ್ತ ಗಮನ ನೀಡಬೇಕು. ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಮೊಬೈಲ್‌ ಫೋನ್‌ ಸ್ಥಗಿತಗೊಳಿಸಿ ನಿಮ್ಮೊಳಗೆ ನೀವು ಬೆರೆಯಬೇಕು. ಓದುವ ಸಮಯದಲ್ಲಿ ಓದದೇ ಭವಿಷ್ಯದಲ್ಲಿ ಪಶ್ಚಾತ್ತಾಪಪಡುವುದರಿಂದ ಪ್ರಯೋಜನವಿಲ್ಲʼ ಎಂದು ಕಿವಿಮಾತು ಹೇಳಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಅಧ್ಯಕ್ಷ ಎಸ್.ಜಯರಾಮರೆಡ್ಡಿ, ‘ಶಿಕ್ಷಣ ಎಂಬುದು ಕೇವಲ ಪುಸ್ತಕದ ಗೀಳಾಗಬಾರದು. ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಲ್ಲಿ ಅದು ನಿಜವಾದ ಶಿಕ್ಷಣ. ಈ ಹಿನ್ನೆಲೆಯಲ್ಲಿ ರೆಡ್ಡಿ ಜನಸಂಘ ಶಿಕ್ಷಣ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದೆʼ ಎಂದರು.

ಉಪಾಧ್ಯಕ್ಷರಾದ ಡಿ.ಎನ್.ಲಕ್ಷ್ಮಣರೆಡ್ಡಿ, ಕೆ.ಎನ್.ಕೃಷ್ಣಾರೆಡ್ಡಿ, ವೆಂಕಟಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶೇಖರ್‌ ರೆಡ್ಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸೋಮಶೇಖರ್‌ ರೆಡ್ಡಿ, ಪ್ರಾಂಶುಪಾಲ ಡಾ.ವಿಜಯಸಿಂಹರೆಡ್ಡಿ ಇದ್ದರು.

ವಿದ್ಯಾರ್ಥಿಗಳಿಗಾಗಿ ಹಾಡು, ನೃತ್ಯ, ಭಾಷಣ, ಏಕಪಾತ್ರ ಅಭಿನಯ, ಮೂಕಾಭಿನಯ, ಸಮೂಹಗಾನ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.