
ಬೆಂಗಳೂರು: ‘ಮಹಾಯೋಗಿ ವೇಮನ ಅವರ ಸಾಹಿತ್ಯ ಬದುಕಿಗೆ ಹತ್ತಿರವಾಗಿದ್ದು, ಇದರಲ್ಲಿ ಸ್ವರ್ಗ ಮತ್ತು ನರಕದ ಬಗ್ಗೆ ಪ್ರಸ್ತಾಪ ಮಾಡಿಲ್ಲ’ ಎಂದು ಎರೆಹೊಸಹಳ್ಳಿ ರೆಡ್ಡಿ ಗುರು ಪೀಠದ ವೇಮನಾನಂದ ಸ್ವಾಮೀಜಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಆಂಧ್ರಪ್ರದೇಶದಲ್ಲಿ ಜನಿಸಿದ ವೇಮನ ಅವರು ತೆಲುಗು ಭಾಷೆಯಲ್ಲಿ ಅಂದಾಜು 15 ಸಾವಿರ ಪದ್ಯಗಳನ್ನು ರಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಅಧೀಕ್ಷಕರಾಗಿದ್ದ ಎಸ್.ಆರ್. ಪಾಟೀಲ ಅವರು ತೆಲುಗು ಕಲಿತು, ಅವರ ಐದು ಸಾವಿರಕ್ಕೂ ಹೆಚ್ಚು ಪದ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು ಎಂದು ತಿಳಿಸಿದರು.
ಮಹಾಯೋಗಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಆದರೆ, ಪಾಶ್ಚಿಮಾತ್ಯರು ಹೆಚ್ಚು ಸಂಶೋಧನೆ ಮಾಡಿದ್ದಾರೆ. ಶರಣ ಸಾಹಿತ್ಯ, ದಾಸ ಸಾಹಿತ್ಯದಂತೆ ವೇಮನ ಸಾಹಿತ್ಯವೂ ಹೆಚ್ಚು ಹೆಸರುವಾಸಿಯಾಗಲಿ. ಇತಿಹಾಸ ತಿಳಿದುಕೊಳ್ಳದೇ, ಭವಿಷ್ಯ ನಿರ್ಮಿಸಿಕೊಳ್ಳಲು ಆಗುವುದಿಲ್ಲ. ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಉಪನ್ಯಾಸ ನೀಡಿದ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದ ಬ.ಗೌಡಪ್ಪಗೋಳ, ‘1412ರಲ್ಲಿ ಜನಿಸಿದ ವೇಮನರು ತತ್ವಜ್ಞಾನಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣ ಸಾಧ್ಯ. ಜೀವನದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ, ದಿಗಂಬರರಾಗಿ ದೇಶ ಸಂಚಾರ ಮಾಡಿದರು’ ಎಂದು ನುಡಿದರು.
ಇದಕ್ಕೂ ಮುನ್ನ ಬಸವರಾಜು ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಡ್ಸನ್ ವೃತ್ತದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ವೇಮನರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.
ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಎಸ್.ಜಯರಾಮ ರೆಡ್ಡಿ, ಪ್ರದಾನ ಕಾರ್ಯದರ್ಶಿ ಎನ್.ಶೇಖರ್ ರೆಡ್ಡಿ ಮಾತನಾಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಬನಶಂಕರಿ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.