
ಬೆಂಗಳೂರು: ಹೃದಯವನ್ನು ಬೆಸೆಯುವ ಅಮೂಲ್ಯವಾದ ಸಾಧನವೆಂದರೆ ಸಂಸ್ಕೃತಿ. ಆದರೆ, ಕಾಲ ಬದಲಾದಂತೆ ದೇಶದಲ್ಲಿ ಸಂಸ್ಕೃತಿ ಕಡಿಮೆಯಾಗುತ್ತಿದ್ದು, ಇದನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.
ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂತವಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಂಸ್ಕೃತಿಯ ಬಂಧ ಇಲ್ಲವಾದರೆ ಸಾಧನೆ ಕಷ್ಟ. ಪ್ರಸ್ತುತ ಸಂಸ್ಕೃತಿ ವಿಚಾರದ ಬಗ್ಗೆ ಹೆಚ್ಚು ಚರ್ಚಿಸಬೇಕಿದೆ. ಮೂರು ಮಹಾಕಾವ್ಯ ಮತ್ತು ಅನೇಕ ಕಾದಂಬರಿಗಳನ್ನು ಬರೆದ ಬಳಿಕ ಸಂಸ್ಕೃತಿ ವಿಚಾರ ಕುರಿತು ಬರೆದೆ. ವಿಶ್ವ ಸಂಸ್ಕೃತಿಯ ಮಹಾಯಾನದ ಮೂರು ಸಂಪುಟಗಳು ಬಿಡುಗಡೆಯಾಗಿದ್ದು, ಏಳು ತಿಂಗಳಲ್ಲಿ ನಾಲ್ಕನೇ ಸಂಪುಟ ಹೊರ ಬರಲಿದೆ. ನಂತರ ಐದನೇ ಸಂಪುಟ ತರಲಾಗುವುದು. ಅದರಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಸಂಸ್ಕೃತಿ ಹೇಗೆ ಬೆಳೆಸಲು ಸಾಧ್ಯ ಎಂಬುದನ್ನು ವಿವರಿಸಲಾಗುತ್ತದೆ’ ಎಂದು ತಿಳಿಸಿದರು.
‘ಜಗತ್ತಿನ ಬಹುತೇಕ ಚಿಂತಕರು ಒಂದೇ ರೀತಿ ಆಲೋಚಿಸುತ್ತಾರೆ. ಮನಸ್ಸಿಗೆ ಹತ್ತಿರವಾದ ವಿಚಾರವನ್ನೇ ಹೇಳುತ್ತಾರೆ. ಕೆಲವರು ಮಾತ್ರ ಪಂಥ, ಜಾತಿಯ ಬಗ್ಗೆ ಯೋಚಿಸುತ್ತಾರೆ. ವಿಶ್ವದ ಸಂಸ್ಕೃತಿಯಲ್ಲಿ ಎಲ್ಲಿ ಹುಡುಕಿದರೂ ದ್ವೇಷ ಸಿಗುವುದಿಲ್ಲ. ಪ್ರಾಮಾಣಿಕವಾಗಿ ಚಿಂತನೆ ಮಾಡಬೇಕು. ಅದಕ್ಕೆ ಯಾವುದೇ ಪಾಂಡಿತ್ಯ, ಪಂಡಿತರು ಬೇಕಾಗಿಲ್ಲ. ಸಾಲು ಮರದ ತಿಮ್ಮಕ್ಕ ಅವರದು ಎಂತಹ ಅದ್ಭುತ ಸಂಸ್ಕೃತಿ. ಅದಕ್ಕೆ ಯಾವ ಶಿಕ್ಷಣ, ಕಾಲೇಜು ಬೇಕಾಗಿಲ್ಲ. ರಸ್ತೆಬದಿ ಗಿಡ, ಮರಗಳನ್ನು ಬೆಳೆಸಿ ಮಾದರಿಯಾದವರು. ತಿಮ್ಮಕ್ಕರಂತಹ ಶುದ್ಧ ಮನಸ್ಸಿನವರ ಸ್ನೇಹ ಮಾಡಬೇಕು. ಅಂತಹ ಮನಸ್ಸಿನವರು ನಾಲ್ಕು ಜನ ಇದ್ದರೆ ಸಾಕು. ಅದೇ ಬದುಕಿನ ಆಸ್ತಿ’ ಎಂದರು.
ಆಡಳಿತ ನಡೆಸುವವರು ತಗ್ಗಿ ನಡೆಯಬೇಕು ಮತ್ತು ಸದ್ಗುಣವುಳ್ಳವರಾಗಿರಬೇಕು. ಮತ್ತೊಬ್ಬರನ್ನು ನಿಂದಿಸುವುದೇ ಸಂಸ್ಕೃತಿ ಅಲ್ಲ. ಅದಕ್ಕೆ ಅರ್ಥ ಇರುವುದಿಲ್ಲ. ಎಷ್ಟೇ ಸಂಪತ್ತು, ಅಧಿಕಾರ ಸಂಪಾದನೆ ಮಾಡಿದರೂ ನೆಮ್ಮದಿ ಇರದಿದ್ದರೆ ಬದುಕು ಸಾರ್ಥಕವಾಗುವುದಿಲ್ಲ ಎಂದು ನುಡಿದರು.
ಜಗತ್ತಿನ ಇತಿಹಾಸ ನೋಡಿದರೆ ಹಿಂದೆ ಸಮಾಜದಲ್ಲಿ ಶಾಂತಿ ನೆಲಸಿತ್ತು. ಈಗ ಎಷ್ಟೇ ಸಂಪಾದಿಸಿದರೂ ತೃಪ್ತಿ ಇರುವುದಿಲ್ಲ. ಅಂತಹ ಬದುಕು ಬೇಕೆ? ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೇವೆ. ಮಾಡಿದ ತಪ್ಪು ತಿದ್ದಿಕೊಂಡು ಮುಂದೆ ಸಾಗಬೇಕು. ಆಡಂಬರ ಜೀವನದಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಜಿ. ರಾಘವನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಿರಂಜೀವಿ ಸಿಂಘ್, ನಿರ್ದೇಶಕ ಸುರೇಶ್, ವಿದ್ವಾಂಸ ಆರ್.ಗಣೇಶ್ ಮಾತನಾಡಿದರು.
12 ದಿನ ನಡೆಯುವ ಉತ್ಸವದಲ್ಲಿ ಚಲನಚಿತ್ರಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಪ್ರದರ್ಶನ ಹಾಗೂ ವಿಚಾರಗೋಷ್ಠಿಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.