ADVERTISEMENT

ವಿಕ್ಟೋರಿಯಾ ಆಸ್ಪತ್ರೆ: ಸುಟ್ಟ ಗಾಯ ಚಿಕಿತ್ಸೆಗೆ ದಿನದ 24 ಗಂಟೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 19:29 IST
Last Updated 14 ನವೆಂಬರ್ 2020, 19:29 IST

ಬೆಂಗಳೂರು: ಪಟಾಕಿ ಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಈ ಕೇಂದ್ರಕ್ಕೆ ಅಗತ್ಯ ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನದ 24 ಗಂಟೆಯೂ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ. ಕೇಂದ್ರದಲ್ಲಿ 54 ಹಾಸಿಗೆಗಳಿವೆ. ಕಳೆದ ವರ್ಷ ಪಟಾಕಿ ಸಿಡಿತದಿಂದ ಉಂಟಾದ ಗಾಯಕ್ಕೆ ಇಲ್ಲಿ 15 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದರು.

‘ಪಟಾಕಿ ಬಳಸದೆಯೇ ದೀಪಾವಳಿ ಆಚರಿಸುವ ಬಗ್ಗೆ ಹಾಗೂ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಬೇಕಾದ ಬಗ್ಗೆ ಜನರಿಗೆ ಜಾಗೃತಿ ಮೂಡುತ್ತಿದೆ. ಹಾಗಾಗಿ ಪಟಾಕಿ ಸುಡುವ ವೇಳೆ ಗಾಯಗೊಂಡು ಚಿಕಿತ್ಸೆಗೆ ಬರುವವರ ಸಂಖ್ಯೆ ವರ್ಷೇ ವರ್ಷೇ ಇಳಿಮುಖವಾಗುತ್ತಿದೆ. ಆದರೂ ಚಿಕಿತ್ಸೆಗೆ ಎಲ್ಲರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ ಪರಿಣಾಮ ಈ ಬಾರಿ ಗಾಯ ಮಾಡಿಕೊಳ್ಳುವವರ ಸಂಖ್ಯೆ ಇನ್ನಷ್ಟು ಕಡಿಮೆಯಾಗಬಹುದು. ಪಟಾಕಿಯಿಂದ ಗಾಯವಾದಲ್ಲಿ ಕೂಡಲೇ ನಲ್ಲಿಯ ನೀರಿನಿಂದ ಗಾಯವನ್ನು ತೊಳೆದು, ಹೆಚ್ಚುವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕು’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಡಾ.ಕೆ.ಟಿ. ರಮೇಶ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.