ADVERTISEMENT

23 ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ್ದ ಮಹಿಳೆಯ ಬಂಧನ

ವಿದ್ಯಾರಣ್ಯಪುರ ಪೊಲೀಸರಿಂದ ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 15:20 IST
Last Updated 24 ಮಾರ್ಚ್ 2022, 15:20 IST
ವಿದ್ಯಾರಣ್ಯಪುರ ಪೊಲೀಸರು ಆರೋಪಿ ಜಯಂತಿ ಕಡೆಯಿಂದ ಜಪ್ತಿ ಮಾಡಿರುವ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ
ವಿದ್ಯಾರಣ್ಯಪುರ ಪೊಲೀಸರು ಆರೋಪಿ ಜಯಂತಿ ಕಡೆಯಿಂದ ಜಪ್ತಿ ಮಾಡಿರುವ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ   

ಬೆಂಗಳೂರು: ನಗರದಲ್ಲಿ ಸುತ್ತಾಡಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪದಡಿ ಜಯಂತಿ ಅಲಿಯಾಸ್ ಕುಟಿಯಮ್ಮ ಅಲಿಯಾಸ್ ಮೇರಿ (31) ಎಂಬುವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

‘ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಬಳಿಯ ಕಾವಲ್‌ ಬೈರಸಂದ್ರದ ಜಯಂತಿ, ವಿದ್ಯಾರಣ್ಯಪುರದ ಎ.ಎಂ.ಎಸ್. ಬಡಾವಣೆಯ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪುರಾವೆಗಳನ್ನ ಸಂಗ್ರಹಿಸಿ ಅವರನ್ನು ಬಂಧಿಸಲಾಗಿದೆ. 75 ಗ್ರಾಂ ಚಿನ್ನಾಭರಣ ಹಾಗೂ 638 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಹೇಳಿದರು.

‘ಅಪರಾಧ ಹಿನ್ನೆಲೆಯುಳ್ಳ ಜಯಂತಿ, 2017ರಿಂದಲೇ ಕಳ್ಳತನ ಎಸಗುತ್ತಿದ್ದರು. ಅಶೋಕನಗರ, ಆರ್.ಟಿ. ನಗರ, ಯಶವಂತಪುರ, ಹೆಬ್ಬಾಳ ಹಾಗೂ ಸುತ್ತಮುತ್ತಲಿನ 23 ಮನೆಗಳಲ್ಲಿ ಆರೋಪಿ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

ADVERTISEMENT

ಬೀಗ ಹಾಕಿರುತ್ತಿದ್ದ ಮನೆಗಳ ಗುರುತು: ‘ಮಾರ್ಕೆಟ್ ಬಾಬು ಎಂಬುವರನ್ನು ಜಯಂತಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರವಾಗಿ, ಪ್ರತ್ಯೇಕವಾಗಿ ವಾಸವಿದ್ದರು. ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಜಯಂತಿ, ಕದ್ದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು’ ಎಂದೂ ಹೇಳಿದರು.

‘ನಗರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಜಯಂತಿ ಸುತ್ತಾಡುತ್ತಿದ್ದರು. ಬೀಗ ಹಾಕಿರುತ್ತಿದ್ದ ಮನೆ ಕಾಣುತ್ತಿದ್ದಂತೆ, ಅದರ ಬಳಿ ಹೋಗುತ್ತಿದ್ದರು. ಬಾಗಿಲು ಎದುರು ನಿಂತು, ‘ಯಾರಾದರೂ ಇದ್ದೀರಾ’ ಎಂದು ಕೂಗುತ್ತಿದ್ದರು. ಪ್ರತಿಕ್ರಿಯೆ ಬಾರದಿದ್ದಾಗ, ಬೀಗ ಮುರಿದು ಮನೆಯೊಳಗೆ ಹೋಗುತ್ತಿದ್ದರು. ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದು ಕದ್ದುಕೊಂಡು ಪರಾರಿಯಾಗುತ್ತಿದ್ದರು’ ಎಂದೂ ತಿಳಿಸಿದರು.

‘ಕೆಲ ಮನೆಗಳಿಗೆ ಬೀಗ ಹಾಕಿದರೂ, ಒಳಗೆ ನಿವಾಸಿಗಳು ಇರುತ್ತಿದ್ದರು. ಅಂಥ ಸಂದರ್ಭದಲ್ಲಿ, ವಿಳಾಸ ಕೇಳುವ ನೆಪದಲ್ಲಿ ಮಾತನಾಡಿ ಅಲ್ಲಿಂದ ಹೊರಡುತ್ತಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.