ADVERTISEMENT

ಧರಣಿ ಕೈಬಿಟ್ಟ ಗ್ರಾಮಸ್ಥರು ಕ್ವಾರಿಯತ್ತ ಕಸದ ಟ್ರಕ್‌ಗಳು

ಗ್ರಾಮದ ಅಭಿವೃದ್ಧಿಗೆ ಮೇಯರ್ ಗಂಗಾಬಿಕಾ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 19:21 IST
Last Updated 25 ಜನವರಿ 2019, 19:21 IST

ಬೆಂಗಳೂರು: ಕಸ ತುಂಬಿಕೊಂಡ ಟ್ರಕ್‌ಗಳು ಸಂಚರಿಸಬೇಕಿದ್ದ ರಸ್ತೆಯನ್ನು ಬಂದ್‌ ಮಾಡಿ ಧರಣಿ ಆರಂಭಿಸಿದ್ದ ಬೆಳ್ಳಹಳ್ಳಿ ಗ್ರಾಮಸ್ಥರು, ಮೇಯರ್ ಗಂಗಾಂಬಿಕಾ ಅವರು ನೀಡಿದ ಭರವಸೆ ಮೇರೆಗೆ ಧರಣಿಯನ್ನು ಶುಕ್ರವಾರ ಅಂತ್ಯಗೊಳಿಸಿದ್ದಾರೆ.

‘ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಗ್ರಾಮದ ಅಭಿವೃದ್ಧಿಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿ ಬುಧವಾರದಿಂದ (ಜ. 22) ಗ್ರಾಮಸ್ಥರು ಧರಣಿ ಆರಂಭಿಸಿದ್ದು. ಅದರಿಂದಾಗಿ 250ಕ್ಕೂ ಹೆಚ್ಚು ಟ್ರಕ್‌ಗಳು ಕ್ವಾರಿಯತ್ತ ಹೋಗಿರಲಿಲ್ಲ.

ಧರಣಿ ಮುಂದುವರಿದರೆ ಕಸದ ವಿಲೇವಾರಿ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದನ್ನು ಅರಿತ ಮೇಯರ್ ಗಂಗಾಂಬಿಕಾ, ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಅವರ ಜೊತೆ ಸ್ಥಳಕ್ಕೆ ಹೋಗಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.

ADVERTISEMENT

‘ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಉದ್ಯಾನ, ಆಟದ ಮೈದಾನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದ ಬಿಬಿಎಂಪಿಯ ಹಿಂದಿನ ಅಧಿಕಾರಿಗಳು, ಕ್ವಾರಿ ನಿರ್ಮಾಣ ಮಾಡಿ ಕಸ ಸುರಿಯಲು ಆರಂಭಿಸಿದ್ದರು. ಕಸದಿಂದ ಕ್ವಾರಿ ತುಂಬುತ್ತಿದ್ದು, ಭರವಸೆ ಮಾತ್ರ ಈಡೇರಿಲ್ಲ. ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.

ಮೇಯರ್ ಗಂಗಾಂಬಿಕಾ, ‘ಗ್ರಾಮದ ಅಭಿವೃದ್ಧಿಗೆ ಬಿಬಿಎಂಪಿ ಸಿದ್ಧವಿದ್ದು, ಘನತ್ಯಾಜ್ಯ ನಿರ್ವಹಣೆ ನಿಧಿಯಿಂದ ಹಣ ಬಿಡುಗಡೆ ಮಾಡಲಾ
ಗುವುದು’ ಎಂದು ಭರವಸೆ ನೀಡಿ ಸ್ಥಳದಲ್ಲಿದ್ದ ಆಯುಕ್ತರಿಗೆ ಸೂಚನೆ ನೀಡಿದರು. ಅದಕ್ಕೆ ಒಪ್ಪಿದ ಗ್ರಾಮಸ್ಥರು, ಧರಣಿ ಕೈಬಿಟ್ಟರು. ಭರವಸೆ ಈಡೇರದಿದ್ದರೆ ಪುನಃ ಧರಣಿ ಆರಂಭಿಸುವ ಎಚ್ಚರಿಕೆ ಸಹ ನೀಡಿದರು. ನಂತರವೇ ಕಸ ಹೊತ್ತು ನಿಂತಿದ್ದ ಟ್ರಕ್‌ಗಳು ಕ್ವಾರಿಯತ್ತ ಹೊರಟವು.

ಪಟ್ಟಿ ಸಿದ್ಧಪಡಿಸಿ ಹಣ ಬಿಡುಗಡೆ

‘ಪ್ರಜಾವಾಣಿ’ ಜೊತೆ ಮಾತನಾಡಿದ ಮೇಯರ್‌, ‘ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂಬುದನ್ನು ಗ್ರಾಮಸ್ಥರಿಂದ ತಿಳಿದುಕೊಳ್ಳಲಾಗುವುದು. ನಂತರವೇ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು.

‘ಕಸ ವಿಂಗಡಣೆ ಅವೈಜ್ಞಾನಿಕವಾಗಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಸ್ಥಳೀಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ವೈಜ್ಞಾನಿಕ ಕಸ ವಿಂಗಡಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.