ಬೆಂಗಳೂರು: ವಿಶ್ವಕರ್ಮ ಸಮಾಜದ ಏಕತೆ, ಸಂಘಟನೆ ಹಾಗೂ ಅವರ ಹಕ್ಕು ಬಾಧ್ಯತೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನವೆಂಬರ್ ಕೊನೆಯ ವಾರದಲ್ಲಿ ವಿಶ್ವಕರ್ಮ ಪಾಂಚಜನ್ಯ ಯಾತ್ರೆ ನಡೆಸಲಾಗುವುದು ಎಂದು ವಿಶ್ವಕರ್ಮ ಮಹಾ ಒಕ್ಕೂಟ ತಿಳಿಸಿದೆ.
ಶನಿವಾರ ನಡೆದ ಪಾಂಚಜನ್ಯ ಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಿಜಯಕುಮಾರ ಪತ್ತಾರ, ‘ವಿಶ್ವಕರ್ಮ ಮಹಾ ಒಕ್ಕೂಟವು 2024ರ ನವೆಂಬರ್‌ನಲ್ಲಿ ಅಸ್ವಿತ್ವಕ್ಕೆ ಬಂದಿದೆ. ಈಗ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪಾಂಚಜನ್ಯ ಯಾತ್ರೆಯ ಮೂಲಕ ಸಮುದಾಯದ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
‘ಒಂದು ವರ್ಷದಲ್ಲಿ ವಿಶ್ವಕರ್ಮ ಸಮಾಜದ ಏಳಿಗೆಗೆ ಒಕ್ಕೂಟ ಕೈಗೊಂಡ ಸಮಾಜಮುಖಿ ಕೆಲಸಗಳನ್ನು ಈ ಸಂದರ್ಭದಲ್ಲಿ ಪರಾಮರ್ಶಿಸಲಾಗುತ್ತದೆ. ವಿಶ್ವಕರ್ಮ ಸಮಾಜಕ್ಕೆ ರಾಜಕೀಯದಲ್ಲಿ ಸ್ಥಾನ ನೀಡುವುದು, ಮುಜರಾಯಿ ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ಇಬ್ಬರು ವಿಶ್ವಕರ್ಮರಿಗೆ ಪ್ರಾತಿನಿಧ್ಯ ನೀಡುವಂತೆ ತಿದ್ದುಪಡಿ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸುವಂತೆ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಒಕ್ಕೂಟದ ಜಾಗೃತಿ ಗೀತೆ ಮತ್ತು ಮಾಹಿತಿ ಕೈಪಿಡಿಯ ಮುಖಪುಟ ವಿನ್ಯಾಸವನ್ನು ಬಿಡುಗಡೆ ಮಾಡಲಾಯಿತು.
ಒಕ್ಕೂಟದ ಗೌರವ ಅಧ್ಯಕ್ಷ ಸರ್ವೇಶ ಆಚಾರ್, ಉಪಾಧ್ಯಕ್ಷ ಮಹಾದೇವ ಪಂಚಾಳ, ಪ್ರಧಾನ ಸಂಚಾಲಕ ಈಶ್ವರ ವಿಶ್ವಕರ್ಮ, ಖಜಾಂಚಿ ಸುರೇಶ ಪತ್ತಾರ, ಸಂಘಟನಾ ಕಾರ್ಯದರ್ಶಿ ಮೋಹನ ನರಗುಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.