ADVERTISEMENT

ಪರ ಯುವತಿ ಜೊತೆ ಸಲುಗೆ: ಪ್ರಿಯಕರನಿಗೆ ಚಾಕು ಇರಿತ, ಕೊಲೆಗೆ ಯತ್ನಿಸಿದ ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 23:30 IST
Last Updated 23 ಜುಲೈ 2023, 23:30 IST
ಜಿಂಟೊದಾಸ್
ಜಿಂಟೊದಾಸ್   

ಬೆಂಗಳೂರು: ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ಜೋಗೀಶ್ (28) ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಮಹಿಳೆ ಜಿಂಟೊದಾಸ್ (36) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಜಿಂಟೊದಾಸ್ ಹಾಗೂ ಜೋಗೀಶ್, ಇಬ್ಬರೂ ಅಸ್ಸಾಂನವರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆಂದು ಗೊತ್ತಾಗಿದೆ. ಜುಲೈ 21ರಂದು ಜೋಗೀಶ್‌ ಅವರಿಗೆ ಚಾಕು ಇರಿದು ಜಿಂಟೊದಾಸ್ ಪರಾರಿಯಾಗಿದ್ದರು. ವಿಶೇಷ ತಂಡ ರಚಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ಪತಿ ತೊರೆದಿದ್ದ ಆರೋಪಿ: ‘ಜಿಂಟೊದಾಸ್‌ ಅವರಿಗೆ ಮದುವೆಯಾಗಿ, 16 ವರ್ಷಗಳ ಮಗಳಿದ್ದಾಳೆ. ಪತಿ ತೊರೆದು ಬೆಂಗಳೂರಿಗೆ ಬಂದಿದ್ದ ಆರೋಪಿ, ಮಹಿಳೆಯರ ಆರೈಕೆ ಕೇಂದ್ರವೊಂದರಲ್ಲಿ ಸಹಾಯಕಿ ಕೆಲಸ ಮಾಡುತ್ತಿದ್ದರು. ಒಂಟಿಯಾಗಿ ಕೊಠಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಭದ್ರತಾ ಸಿಬ್ಬಂದಿ ಜೋಗೀಶ್, ಸ್ನೇಹಿತರ ಜೊತೆ ಕೊಠಡಿಯಲ್ಲಿ ನೆಲೆಸಿದ್ದರು. ಜೋಗೀಶ್ ಹಾಗೂ ಜಿಂಟೊದಾಸ್, ಕೆಲ ತಿಂಗಳ ಹಿಂದೆಯಷ್ಟೇ ಪರಿಚಯವಾಗಿದ್ದರು. ನಂತರ, ಇಬ್ಬರು ಪ್ರೀತಿಸಲಾರಂಭಿಸಿದ್ದರು. ಹಲವೆಡೆ ಸುತ್ತಾಡಿದ್ದರು. ಸಲುಗೆ ಸಹ ಇತ್ತು’ ಎಂದರು.

ಯುವತಿ ಜೊತೆ ಸಲುಗೆ: ‘ಜಿಂಟೊದಾಸ್‌ ಅವರಿಂದ ದೂರವಾಗಲಾರಂಭಿಸಿದ್ದ ಜೋಗೀಶ್, ಬೇರೆ ಯುವತಿ ಜೊತೆ ಸಲುಗೆ ಬೆಳೆಸಿಕೊಂಡಿದ್ದರು. ಇದರ ನಡುವೆಯೇ ತಮ್ಮ ಖರ್ಚಿಗೆಂದು ಜಿಂಟೊದಾಸ್‌ ಕಡೆಯಿಂದ ₹ 15 ಸಾವಿರ ಸಾಲ ಪಡೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಯುವತಿ ಜೊತೆ ಜೋಗೀಶ್ ಸುತ್ತಾಡುತ್ತಿದ್ದ ಸಂಗತಿ ಆರೋಪಿಗೆ ಗೊತ್ತಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿತ್ತು. ತಾವು ನೀಡಿರುವ ₹ 15 ಸಾವಿರ ಸಾಲವನ್ನು ವಾಪಸು ನೀಡುವಂತೆ ಆರೋಪಿ ಒತ್ತಾಯಿಸಿದ್ದರು. ಹಣವಿಲ್ಲವೆಂದು ಜೋಗೀಶ್ ಹೇಳಿದ್ದರು’

‘ಹಣ ನೀಡಲು ಸತಾಯಿಸುತ್ತಿದ್ದರಿಂದ ಕೋಪಗೊಂಡಿದ್ದ ಜಿಂಟೊದಾಸ್, ಜುಲೈ 21ರಂದು ಬೆಳಿಗ್ಗೆ ಜೋಗೀಶ್ ವಾಸವಿದ್ದ ಕೊಠಡಿಗೆ ಬಂದು ಜಗಳ ತೆಗೆದಿದ್ದರು. ಇದೇ ಸಂದರ್ಭದಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಾಯಗೊಂಡಿದ್ದ ಜೋಗೀಶ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ತಿಳಿಸಿದರು.

‘ಕೃತ್ಯ ಎಸಗಿದ ನಂತರ, ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಆರೋಪಿ ಉಳಿದುಕೊಂಡಿದ್ದರು. ಅಸ್ಸಾಂಗೆ ಹೋಗಲು ಆರೋಪಿ ತಯಾರಿ ನಡೆಸಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಜೋಗೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.