
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಬೆಂಗಳೂರು ನಗರ, ಹುಬ್ಬಳ್ಳಿ ಮತ್ತು ಮಂಗಳೂರಿನ ಆಟೊ ಮತ್ತು ಕ್ಯಾಬ್ ಚಾಲಕ ಸಂಘಟನೆಗಳಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಚಾಲಕರು ಸ್ಥಳೀಯ ಆ್ಯಪ್‌ಗಳನ್ನು ಬೆಂಬಲಿಸುವ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ’ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಮಂಜುನಾಥ್, ಪೀಸ್ ಆಟೊ ಸಂಘಟನೆಯ ಮುಖ್ಯಸ್ಥ ರಘು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಓಲಾ ಮತ್ತು ಊಬರ್‌ನಂತಹ ದೊಡ್ಡ ಕಂಪನಿಗಳು ಸಾರಿಗೆ ಕ್ಷೇತ್ರದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಆಟೊ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ನೀಡುವ ಆದಾಯವನ್ನು ಕಡಿತಗೊಳಿಸುತ್ತಿವೆ. ನಮ್ಮ ಕಠಿಣ ಪರಿಶ್ರಮ ಗೌರವಿಸುವ ಮತ್ತು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಅವಕಾಶ ನೀಡುವ ನ್ಯಾಯೋಚಿತ ವ್ಯವಸ್ಥೆಯನ್ನು ನಾವು ಬಯಸುತ್ತೇವೆ. ಆದ್ದರಿಂದ ಸ್ಥಳೀಯ ಆ್ಯಪ್‌ಗಳಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.
ʼಬಹು ರಾಷ್ಟ್ರೀಯ ಕಂಪನಿಗಳ ಆ್ಯಪ್‌ಗಳಲ್ಲಿ ಆರಂಭದಲ್ಲಿ ದೊಡ್ಡ ಪ್ರೋತ್ಸಾಹದೊಂದಿಗೆ ಚಾಲಕರನ್ನು ಆಕರ್ಷಿಸಲಾಗುತ್ತದೆ. ನಂತರ ಚಾಲಕರ ಆದಾಯವನ್ನು ಕಡಿತಗೊಳಿಸಲಾಗುತ್ತದೆ. ಚಾಲಕರು 12 ರಿಂದ 14 ಗಂಟೆಗಳ ಕಾಲ ವಾಹನ ಚಲಾಯಿಸುತ್ತಾರೆ. ಆದರೂ ಕುಟುಂಬಗಳ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಸಂಪಾದಿಸಲು ಆಗುತ್ತಿಲ್ಲ. ಕಂಪನಿಗಳು ನೀಡುವ ಪ್ರೋತ್ಸಾಹದ ಮೊತ್ತ ಬದಲಾಗುತ್ತಲೇ ಇರುತ್ತದೆ. ಚಾಲಕರ ಮತ್ತು ಪ್ರಯಾಣಿಕರ ಸ್ನೇಹಿಯಾಗಿರುವ ನಮ್ಮ ಯಾತ್ರಿ ಆ್ಯಪ್ ಬಳಸಲು ನಿರ್ಧರಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.