ADVERTISEMENT

ಜಾತಿ ಜನಗಣತಿ ವರದಿ ತಿರಸ್ಕಾರಕ್ಕೆ ಒಕ್ಕಲಿಗರ ಸಂಘ ಆಗ್ರಹ

ಸಿಎಂಗೆ ನೀಡಿದ ಪತ್ರಕ್ಕೆ ಡಿಸಿಎಂ ಡಿಕೆಶಿ, ಇಬ್ಬರು ಸಚಿವರ ಸಹಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 16:26 IST
Last Updated 21 ನವೆಂಬರ್ 2023, 16:26 IST
<div class="paragraphs"><p>ಜನಗಣತಿ-ಸಾಂದರ್ಭಿಕ ಚಿತ್ರ</p></div>

ಜನಗಣತಿ-ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನಗಣತಿ) ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಒಕ್ಕಲಿಗರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.

ರಾಜ್ಯ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರ ನಿಯೋಗವು ಮುಖ್ಯಮಂತ್ರಿಯವರನ್ನು ಮಂಗಳವಾರ ಭೇಟಿಮಾಡಿ ಮನವಿ ಸಲ್ಲಿಸಿದೆ. ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ. ಕೃಷ್ಣ, ಡಿ.ವಿ. ಸದಾನಂದ ಗೌಡ, ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿಗೆ ಸಹಿ ಮಾಡಿದ್ದಾರೆ.

ರಾಜ್ಯದ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌, ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಕೂಡ ಒಕ್ಕಲಿಗರ ಸಂಘದ ಮನವಿಯನ್ನು ಬೆಂಬಲಿಸಿ ಸಹಿ ಮಾಡಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಒಕ್ಕಲಿಗ ಸಮುದಾಯದ ಬಹುತೇಕ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು ಸಹಿ ಮಾಡಿದ್ದಾರೆ. ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಕೆ. ವೆಂಕಟೇಶ್‌ ಅವರ ಹೆಸರು ಪಟ್ಟಿಯಲ್ಲಿದ್ದರೂ ಅವರು ಸಹಿ ಮಾಡಿಲ್ಲ.

‘2014–15ರಲ್ಲಿ ಎಚ್‌. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋ ಸಮೀಕ್ಷೆ ನಡೆಸಿತ್ತು. ಆಗ ರಾಜ್ಯದ ಜನಸಂಖ್ಯೆ 5.40 ಕೋಟಿ ಇತ್ತು. ಈಗ ಅದು 6.90 ಕೋಟಿಗೆ ಏರಿದೆ. ಹಳೆಯ ದತ್ತಾಂಶಗಳನ್ನು ಆಧರಿಸಿ ಈಗ ವರದಿ ಸಲ್ಲಿಸುವುದು ಅವೈಜ್ಞಾನಿಕ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ಹಿಂದುಳಿದ ವರ್ಗಗಳ ಆಯೋಗವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿಲ್ಲ. ಗಣತಿದಾರರು ಮನೆ, ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿಲ್ಲ. ಶಾಲಾ ಮಕ್ಕಳನ್ನು ಬಳಕೆ ಮಾಡಿಕೊಂಡು ಅವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಲಾಗಿದೆ. ವರದಿಯ ಮೂಲ ಪ್ರತಿ ಆಯೋಗದ ಕಚೇರಿಯಲ್ಲೇ ಲಭ್ಯವಿಲ್ಲ. ಈ ಎಲ್ಲ ಕಾರಣಗಳನ್ನು ಆಧರಿಸಿ ವರದಿಯನ್ನು ತಿರಸ್ಕರಿಸಬೇಕು’ ಎಂದು ಒತ್ತಾಯಿಸಲಾಗಿದೆ.

ಕಾಂತರಾಜ ನೇತೃತ್ವದ ಆಯೋಗ ಸಂಗ್ರಹಿಸಿದ್ದ ದತ್ತಾಂಶಗಳನ್ನು ಆಧರಿಸಿ ಈಗಿನ ಆಯೋಗವು ವರದಿ ಸಲ್ಲಿಸುವುದು ಕಾನೂನುಬಾಹಿರ ನಿರ್ಧಾರವಾಗುತ್ತದೆ. ಆದ್ದರಿಂದ ವರದಿ ಸಲ್ಲಿಸದಂತೆ ಆಯೋಗಕ್ಕೆ ಸೂಚಿಸಬೇಕು. ಈಗ ಮತ್ತೊಮ್ಮೆ ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಪಡೆಯಬೇಕು ಎಂದು ಒಕ್ಕಲಿಗರ ಸಂಘ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.