ADVERTISEMENT

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಅಕ್ರಮ: ಚನ್ನಪ್ಪ ಗೌಡ ನೆಲ್ಲೂರು ಆರೋಪ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 19:31 IST
Last Updated 8 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಇದನ್ನು ಚುನಾವಣಾ ಅಧಿಕಾರಿಗಳು ತಡೆಯದಿದ್ದರೆ, ಭ್ರಷ್ಟಾಚಾರಿಗಳು ಚುನಾವಣೆಯಲ್ಲಿ ಗೆದ್ದು ಸಂಘವನ್ನು ಹಾಳು ಮಾಡಲಿದ್ದಾರೆ’ ಎಂದು ಚುನಾವಣೆಯ ಅಭ್ಯರ್ಥಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖಂಡ ಚನ್ನಪ್ಪ ಗೌಡ ನೆಲ್ಲೂರು ಆತಂಕ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಕ್ಕಲಿಗರ ಸಂಘದ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಮತದಾರರ ಹೆಸರು ನೋಂದಣಿಯಾಗಿದೆ’ ಎಂದು ಆರೋಪಿಸಿದರು.

‘ಮತದಾರರ ಪಟ್ಟಿಯಲ್ಲಿ ಹಲವರಿಗೆ ಒಂದೇ ವಿಳಾಸವಿದೆ. ಕೆಲವರಿಗೆ ವಿಳಾಸವೇ ಇಲ್ಲ. ಮತದಾರರಿಗೆ ತಪ್ಪು ಮೊಬೈಲ್‌ ನಂಬರ್‌ ನಮೂದಿಸಲಾಗಿದ್ದು, ಇನ್ನೂ ಕೆಲವರಮೊಬೈಲ್‌ ಸಂಖ್ಯೆಯೇ ಇಲ್ಲ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಸಾವಿರಾರು ಮತದಾರರಿಗೆ ಒಂದೇ ಮೊಬೈಲ್‌ ಸಂಖ್ಯೆ ನೀಡಲಾಗಿದೆ’ ಎಂದು ದೂರಿದರು.

ADVERTISEMENT

‘ಮತದಾರರ ಪಟ್ಟಿಯಲ್ಲೇ ಈ ರೀತಿಯ ಅಕ್ರಮ ಸ್ಪಷ್ಟವಾಗುತ್ತಿದೆ. ಭ್ರಷ್ಟ ಅಭ್ಯರ್ಥಿಗಳು ಗೆದ್ದರೆ, ಸಂಘದ ಘನತೆಗೆ ಧಕ್ಕೆಯಾಗಲಿದೆ. ಅಕ್ರಮವಾಗಿ ಗೆಲುವು ಸಾಧಿಸುವವರು ಒಕ್ಕಲಿಗರ ಹಿತ ಕಾಪಾಡುತ್ತಾರೆಂದು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಒಕ್ಕಲಿಗರ ಸಂಘದ ಚುನಾವಣಾ ಅಧಿಕಾರಿಗಳು, ಆಡಳಿತಾಧಿಕಾರಿಗಳು ಹಾಗೂ ಸಹಕಾರ ಇಲಾಖೆಯ ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದೇನೆ. ಚುನಾವಣಾ ಅಧಿಕಾರಿಗಳು ತಕ್ಷಣವೇ ಅಕ್ರಮಗಳನ್ನು ತಡೆದು, ಪಾರದರ್ಶಕವಾಗಿ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಭೂಹೋರಾಟ ಸಮಿತಿ ಸದಸ್ಯ ಬಿ.ಎಚ್.ಸುರೇಶ್‌, ‘ಒಕ್ಕಲಿಗರ ಸಂಘದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು ಹಾಗೂ ಸಮುದಾಯದ ಜನರಿಗೆ ನ್ಯಾಯ ಸಿಗಬೇಕೆಂದರೆ ಚುನಾವಣೆಯು ನ್ಯಾಯಯುತವಾಗಿ ನಡೆಯಬೇಕು. ನಕಲಿ ಮತದಾರರನ್ನು ತೆಗೆದು ಹಾಕಿ, ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.